ಅಥಣಿ :
ಮಾಜಿ ಮುಖ್ಯಮಂತ್ರಿ
ಜಗದೀಶ್ ಶೆಟ್ಟ‌ರ್ ವಾಪಸ್ ಬಿಜೆಪಿ ಸೇರ್ಪಡೆ ಸಹ ಮಾತೃ ಪಕ್ಷಕ್ಕೆ ವಾಪಸ್ ಆಗುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಸವದಿ ಹುಟ್ಟುಹಬ್ಬದ ಬ್ಯಾನರ್‌ನಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇರದಿರುವುದು ಸವದಿ ಬಿಜೆಪಿ ಮರುಸೇರ್ಪಡೆ ಗಾಸಿಪ್ ಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಂತಾಗಿದೆ.

ಫೆಬ್ರವರಿ 16 ರಂದು ಲಕ್ಷ್ಮಣ ಸವದಿ ಅವರು 64 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಸವದಿ ಆಪ್ತರು, ಕಾಂಗ್ರೆಸ್ ಮುಖಂಡರು ಅಥಣಿ ಪಟ್ಟಣದಲ್ಲಿ ಬ್ಯಾನರ್‌ ಗಳನ್ನು ಹಾಕಿದ್ದಾರೆ. ಆದರೆ, ಶಾಸಕರಿಗೆ ಶುಭ ಕೋರುವ ಬ್ಯಾನರ್‌ನಲ್ಲಿ ಕಾಂಗ್ರೆಸ್ ಚಿಹ್ನೆಯೇ ಮಾಯವಾಗಿದೆ. ಇದು ಸವದಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ಚರ್ಚೆಗೆ ಕಾರಣವಾಗಿದೆ. ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎಂಬ ಚರ್ಚೆ ಮೊಳಗಿದೆ.

ಈ ಬಗ್ಗೆ ದೆಹಲಿಯಲ್ಲಿ ಸ್ಪಷ್ಟನೆ ನೀಡಿದ ಲಕ್ಷ್ಮಣ ಸವದಿ, ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಇದ್ದಾಗಲೂ ಅಷ್ಟೇ ಈಗಲೂ ಅಷ್ಟೆ, ಹುಟ್ಟುಹಬ್ಬ ಆಚರಿಸಲ್ಲ. ಅಭಿಮಾನಿಗಳಿಗೂ ಬ್ಯಾನ‌ರ್ ಹಾಕದಂತೆ ಹೇಳುತ್ತೇನೆ. ಆದರೆ ಅಭಿಮಾನಿಗಳು, ಬೆಂಬಲಿಗರು ಬ್ಯಾನ‌ರ್ ಹಾಕಿಕೊಳ್ಳುತ್ತಾರೆ. ಜಗದೀಶ್ ಶೆಟ್ಟ‌ರ್ ಬೇರೆ, ನಾನು ಬೇರೆ ಎಂದ ಸವದಿ, ನನ್ನ ವಿಚಾರಗಳು ಬೇರೆ, ಶೆಟ್ಟರ್ ವಿಚಾರಗಳು ಬೇರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ ಎಂದರು.

ಸವದಿ ದೇಹದಲ್ಲಿ ಬಿಜೆಪಿ ಡಿಎನ್ಎ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸವದಿ, ನನ್ನ ಮೈಯಲ್ಲಿ ಇರುವುದು ನನ್ನ ತಂದೆಯ ಡಿಎನ್‌ಎ. ಅಲ್ಲಿ ಅವಮಾನ ಆಗಿದ್ದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದೇನೆ. ನಾನು ಮತ್ತೆ ಬಿಜೆಪಿಗೆ ಹೋಗುವುದಕ್ಕೆ ಹುಚ್ಚಾ ಎಂದು ಹೇಳಿದರು.

ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ ನಾಳೆ ದೆಹಲಿಯಲ್ಲಿ ಪ್ರತಿಭಟನೆ ಆಯೋಜಿಸಿರುವ ಬಗ್ಗೆ ಮಾತನಾಡಿದ ಸವದಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ನ್ಯಾಯಸಮ್ಮತ ಅನುದಾನ ನೀಡುತ್ತಿಲ್ಲ. ಸಂಕಷ್ಟ ಸಂದರ್ಭದಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನ ನೀಡಬೇಕು. ಕರ್ನಾಟಕದಿಂದ ಎಷ್ಟು ಜಿಎಸ್ ಟಿ ಸಂಗ್ರಹ ಆಗುತ್ತೆ ಎಂಬ ಬಗ್ಗೆ ಚರ್ಚಿಸಲಿ ಎಂದರು.

ರಾಜ್ಯದ ಸಂಸದರಿಗೆ ನಾನು ಪ್ರಶ್ನೆ ಮಾಡುತ್ತೇನೆ. ನೀವು ಗುಜರಾತ್‌ನಿಂದ ಗೆದ್ದಿದ್ದೀರಾ? ಇಲ್ಲ ಕರ್ನಾಟಕದಿಂದ ಗೆದ್ದಿದ್ದೀರಾ? ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಸವದಿ ಪ್ರಶ್ನಿಸಿದರು.

ಡಿ.ಕೆ. ಶಿವಕುಮಾ‌ರ್ ಜೈಲಿಗೆ ಹೋಗಿ ಬಂದಿರುವ ಬಗ್ಗೆ ಕೆ.ಎಸ್.ಈಶ್ವರಪ್ಪ ಮಾತಾಡುತ್ತಾರೆ. ಹಾಗಾದರೆ ಬಿಎಸ್ ಯಡಿಯೂರಪ್ಪ ಜೈಲಿಗೆ ಹೋಗಿಲ್ವಾ ಎಂದು ಪ್ರಶ್ನಿಸಬೇಕಾಗುತ್ತದೆ.