ಬೆಂಗಳೂರು:

“ಬೆಂಗಳೂರಿನ‌ 15 ಶಾಲೆಗಳಿಗೆ ಬಂದಿರುವ ಬಾಂಬ್‌ ಬೆದರಿಕೆ ಹುಸಿ ಕರೆಯಾಗಿದ್ದು. ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಹುಸಿ ಬಾಂಬ್ ಕರೆ ಪಡೆದಿದ್ದ ನೀವ್ ಅಕಾಡೆಮಿಗೆ ಭೇಟಿ ನೀಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಹುಸಿ ಬೆದರಿಕೆ ಹಾಕಿದವರನ್ನು 24 ಗಂಟೆಯೋಳಗೆ ಪತ್ತೆ ಮಾಡಲಾಗುವುದು ಪೊಲೀಸರು ಈಗಾಗಲೆ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಹೀಗೆ ಆಗಿತ್ತು. ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿರುವ ಸುದ್ದಿ ತಿಳಿದ ಕೂಡಲೆ ಗಾಬರಿಯಾಯಿತು. ನನಗೆ ಪರಿಚಯವಿರುವ ಕೆಲವು ಶಾಲೆಗಳಿಗೆ ಹೀಗೆ ಇ- ಮೇಲ್‌ ಸಂದೇಶದ ಮೂಲಕ ಬೆದರಿಕೆ ಬಂದಿದೆ. ಪೋಲಿಸ್ ಆಯುಕ್ತರು ಈಗಾಗಲೆ ಸುದ್ದಿಗೋಷ್ಠಿ ನಡೆಸಿ ಇದು ಹುಸಿ ಬಾಂಬ್‌ ಬೆದರಿಕೆ ಎಂದು ಮಾಹಿತಿ ನೀಡಿದ್ದಾರೆ. ಪೋಷಕರು ಆತಂಕದಲ್ಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಧೈರ್ಯದಿಂದ ಇರಬೇಕು” ಎಂದರು.

“ಈಗಾಗಲೆ ಬಾಂಬ್‌ ನಿಷ್ಕ್ರಿಯದಳ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್‌ ಭದ್ರತೆ ಇರುವ ಕಾರಣ ನಮ್ಮ ಮನೆ ಹತ್ತಿರ ಹೀಗೆ ಆಗುವ ಸಾಧ್ಯತೆ ಕಡಿಮೆ. ಆದರೂ ಇದು ಪ್ರಮುಖ ಪ್ರದೇಶವಾದರಿಂದ ಸ್ವಲ್ಪ ಎಚ್ಚರದಿಂದ ಇರಬೇಕು. ಬೆಂಗಳೂರು ಜನತೆಗೆ ಯಾವ ಆತಂಕ ಬೇಡ ಕೆಲವು ದುಷ್ಕರ್ಮಿಗಳಿಂದ ಈ ಬೆದರಿಕೆ ಕರೆ ಬಂದಿದ್ದು, 24 ಗಂಟೆಯೊಳಗೆ ಆರೋಪಗಳನ್ನು ಪತ್ತೆ ಹಚ್ಚುತ್ತೇವೆ” ಎಂದರು.

ಬೆಂಗಳೂರು ಹಬ್ಬ ನಡೆಯುವ ಸಂದರ್ಭದಲ್ಲೆ ಹೀಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಕೇಳಿದಾಗ, “ಕೆಲವರು ಕಿಡಿಗೇಡಿಗಳು ಈ ರೀತಿ ಚೇಷ್ಟೆ ಮಾಡುತ್ತಾರೆ, ಹಬ್ಬ ಅದರ ಪಾಡಿಗೆ ಅದು ನಡೆಯುತ್ತದೆ” ಎಂದು ತಿಳಿಸಿದರು.

ಸೈಬರ್‌ ಕ್ರೈಂ ಪೊಲೀಸರಿಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಿರಾ ಎಂದು ಕೇಳಿದಾಗ “ಸೈಬರ್‌ ಕ್ರೈಂ ವಿಭಾಗದವರು ಸಕ್ರಿಯವಾಗಿದ್ದಾರೆ. ತಕ್ಷಣ ಕ್ರಮಕೈಗೊಂಡು ಸಂಬಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದಾರೆ. ನನಗೂ ಫೋನಿನ ಮೂಲಕ ಮಾಹಿತಿ ನೀಡುತ್ತಿದ್ದಾರೆ. ನಮ್ಮ ಮನೆ ಮುಂದೆ ಕೂಡ ಕಾರ್ಯಚರಣೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

ಈ ರೀತಿ ಹುಸಿ ಬಾಂಬ್‌ ಕರೆ ಮತ್ತೆ ಮತ್ತೆ ಏಕೆ ಕೇಳಿಬರುತ್ತಿದೆ ಎಂದು ಕೇಳಿದಾಗ, “ಇದು ದಿಕ್ಕು ತಪ್ಪಿಸುವಂತಹ ಕೆಲಸ. ಈಗ ಪರಿಕ್ಷೆ ಸಮಯ ಆದ ಕಾರಣ ಹೀಗಾಗಿರಬಹುದು. ಈ ಹಿಂದೆ ಕೊಡ ವಿಮಾನ ತಡವಾಗಿದೆ ಎಂದು ಈ ರೀತಿ ಕರೆ ಮಾಡಿರುವ ಘಟನೆ ನಡೆದಿತ್ತು. ಕೆಲವೊಮ್ಮೆ 10 ಹುಸಿ ಕರೆಗಳ ಪೈಕಿ ಒಂದು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಹುಸಿ ಕರೆಗಳನ್ನು ನಾವು ನಿರ್ಲಕ್ಷಿಸುವುದಿಲ್ಲ. ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ” ಎಂದರು.

*ಎಕ್ಸಿಟ್ ಪೋಲ್ ಮೇಲೆ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ:*

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ, “ಪಕ್ಷದ ಅಧ್ಯಕ್ಷ ಹೊರತಾಗಿ ವೈಯಕ್ತಿಕವಾಗಿ ನನಗೆ ಎಕ್ಸಿಟ್ ಪೋಲ್ ಗಳ ಮೇಲೆ ನಂಬಿಕೆ ಇಲ್ಲ. ನಮ್ಮ ರಾಜ್ಯದಲ್ಲಿ ನಾನು ಏನು ಮಾಡಿದ್ದೆ, ಯಾವ ರೀತಿ ಎಕ್ಸಿಟ್ ಪೋಲ್ ಗಳು ಬಂದವು ಎಂಬುದು ನನಗೆ ಗೊತ್ತಿದೆ. ಯಾರು ಕ್ಷೇತ್ರಗಳಲ್ಲಿ ಸುತ್ತಾಡಿರುತ್ತಾರೋ ಅವರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾದರಿಗಳು ಅಲ್ಪಪ್ರಮಾಣದ್ದಾಗಿರುತ್ತದೆ. ಅದು ಇಡೀ ರಾಜ್ಯದ ಚಿತ್ರಣವನ್ನು ನಿರ್ಧರಿಸುವುದಿಲ್ಲ” ಎಂದು ತಿಳಿಸಿದರು.

ಕೆಲ ರಾಜ್ಯಗಳಲ್ಲಿ ನೇರಹಣಾಹಣಿ ಇದ್ದು, ಆ ರಾಜ್ಯಗಳ ಶಾಸಕರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, “ಈ ಬಗ್ಗೆ ಗೊತ್ತಿಲ್ಲ. ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ” ಎಂದು ತಿಳಿಸಿದರು.

*ಇದುವರೆಗೂ ನನಗೆ ಶಾಸಕರ ರಕ್ಷಣೆ ಜವಾಬ್ದಾರಿ ನೀಡಿಲ್ಲ*

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು, ‘ಪಂಚರಾಜ್ಯ ಚುನಾವಣೆ ನಂತರ ಪಕ್ಷದ ಹೈಕಮಾಂಡ್ ಶಾಸಕರ ರಕ್ಷಣೆ ಜವಾಬ್ದಾರಿ ನೀಡಿದೆಯೇ ಎಂದು ಪ್ರಶ್ನೆ ಕೇಳಿದಾಗ ಅದಕ್ಕೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.

“ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ನನಗಿದೆ. ಶಾಸಕರು ಎಲ್ಲೂ ಹೋಗುವುದಿಲ್ಲ. ಅವರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಆ ಬಗ್ಗೆ ನನಗೆ ಇದುವರೆಗೂ ಯಾವುದೇ ಜವಾಬ್ದಾರಿ ನೀಡಿಲ್ಲ. ತೆಲಂಗಾಣ ಸೇರಿದಂತೆ ಕೆಲವು ಕಡೆ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಮ್ಮ ಪಕ್ಷದವರು ಸ್ಥಳೀಯ ಮಟ್ಟದಲ್ಲೇ ಇದನ್ನು ನಿಭಾಯಿಸುತ್ತಾರೆ” ಎಂದು ಕೇಳಿದರು.

ರಾಜಸ್ಥಾನದಲ್ಲಿ ತೀವ್ರ ಸ್ಪರ್ಧೆ ಇರುವ ಮುನ್ಸೂಚನೆ ಸಿಕ್ಕಿದೆ ಎಂದು ಕೇಳಿದಾಗ, “ನನಗೆ ನನ್ನದೇ ಆದ ಅಭಿಪ್ರಾಯವಿದೆ. ಮತಯಂತ್ರದಲ್ಲಿರುವ ಮತದ ಮಾಹಿತಿ ನಿಮಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. 48 ತಾಸುಗಳ ನಂತರ ಎಲ್ಲವೂ ಹೊರಬೀಳಲಿದೆ. ಈ ಸಮೀಕ್ಷೆಗಳು ಸುಮಾರು 10 ಸಾವಿರ ಮತದಾರರನ್ನು ಸಂಪರ್ಕಿಸಿ ಸಮೀಕ್ಷೆ ಮಾಡಲಾಗಿದೆ. ನಾವು ನಮ್ಮ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಾಗ 1 ಲಕ್ಷದಷ್ಟು ಜನರನ್ನು ಸಮೀಕ್ಷೆ ಮಾಡಿದ್ದೆವು. ತೆಲಂಗಾಣದಲ್ಲಿ ನಾನು 20 ಕ್ಷೇತ್ರ ಓಡಾಡಿದ್ದೇನೆ. ಬೇರೆ ಕ್ಷೇತ್ರಗಳಲ್ಲೂ ವರದಿ ಬಹಳ ಉತ್ತಮವಾಗಿದೆ” ಎಂದರು.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉಚಿತ ಕೊಡುಗೆಗಳನ್ನು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾರಾಯಣ ಮೂರ್ತಿ ಅವರ ಸಲಹೆ ಜನರ ಅಭಿವೃದ್ಧಿಯ ಭಾಗವಾಗಿದೆ. ಅಂತಿಮವಾಗಿ ಸರ್ಕಾರದ ನಿರ್ಧಾರ ಅಂತಿಮ. ಸರ್ಕಾರ ರೈತರು, ಬಡವರಿಗೆ ನೆರವಾಗಬೇಕು. ಬೆಲೆ ಏರಿಕೆ ಸಮಸ್ಯೆಯನ್ನು ಜನಸಾಮಾನ್ಯರು ಹೇಗೆ ಎದುರಿಸಬೇಕು. 70 ರೂ. ಇದ್ದ ಪೆಟ್ರೋಲ್ ಬೆಲೆ 110 ರೂ. ಆಗಿದೆ ಇಂತಹ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಬೇಕು?” ಎಂದು ತಿಳಿಸಿದರು.