ಬೆಳಗಾವಿ : ತನ್ನದೇ ಲೋಕಕ್ಕೆ ಎಲ್ಲರನ್ನೂ ಒಯ್ಯುವ ಶಕ್ತಿಯನ್ನು ಸಂಗೀತ ಹೊಂದಿದೆ. ಸಂಗೀತದ ವೇದಿಕೆಯಲ್ಲಿ ಮಾತಿಗೆ ಸ್ಥಾನವಿಲ್ಲ ಎಂದು ಹಿರಿಯ ಸಾಹಿತಿ, ರಂಗಕರ್ಮಿ ಡಾ.ರಾಮಕೃಷ್ಣ ಮರಾಠೆ ಹೇಳಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ನಗರದ ಆರ್ಕಿಡ್ಸ್ ಆಪಾರ್ಟ್ ಮೆಂಟ್ ನಲ್ಲಿ ಶನಿವಾರ ಸಂಜೆ ಸ್ಪಂದನ ಮೆಲೋಡಿಸ್ ಆಯೋಜಿಸಿದ್ದ ಗಾನ ಕುಸುಮ – ನಾದಮಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತದ ಕುರಿತು ದ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದ ಮರಾಠೆ, ಸಂಗೀತಕ್ಕಿರುವ ಅದ್ಭುತ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಬೆಳಗಾವಿಯಲ್ಲಿ ಸಾಕಷ್ಟು ಜನರಿದ್ದಾರೆ. ಸ್ಪಂದನ ಮೆಲೋಡಿಸ್ ತಂಡ ಕಳೆದ 6 ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಿಗೆ ಮನರಂಜನೆ ನೀಡುತ್ತ ಬಂದಿದೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ವೇದಿಕೆಯಲ್ಲಿದ್ದರು.
ಇದೇ ವೇಳೆ, ʼಗಾನ ಕುಸುಮʼ ಎ೦ಬ ಶೀರ್ಷಿಕೆಯಲ್ಲಿ, ಸ೦ಗೀತ ಜಾದೂಗಾರ ಆರ್. ಡಿ. ಬರ್ಮನ್ ರವರ ಗೀತೆಗಳು ಹಾಗೂ ನಟ ಅನ೦ತನಾಗ್ ಹಿಟ್ಸ್ ನ್ನು ವಿವಿಧ ಕಲಾವಿದರು ಹಾಡುವ ಮೂಲಕ ಸಂಗೀತ ರಸಿಕರ ಮನಸೂರೆಗೊಳಿಸಿದರು. ʼಆಕಾಶದಿ೦ದ ದರೆಗಿಳಿದ ರಂಭೆʼ (ಚಿತ್ರ- ಚ೦ದನದ ಗೊ೦ಬೆ), ʼಚುರಾಲಿಯಾ ಹೇ ತುಮ್ನೇʼ (ಚಿತ್ರ – ಯಾದೋ೦ಕಿ ಬಾರಾತ್) ಮೊದಲಾದ ಪ್ರಸಿದ್ಧ ಗೀತೆಗಳು ಜನರ ಮನಸೂರೆಗೊ೦ಡಿತು. ಗಾಯನದ ಜೊತೆಗೆ ಹಾಡುಗಳಿಗೆ ಚಿಣ್ಣರಾದ ಚೇತನ್ ಮತ್ತು ಮನಸ್ವಿ ನೃತ್ಯವು ಸಭೀಕರನ್ನು ಮನರ೦ಜಿಸಿತು.
ಪೂರ್ಣಾ ಹೆಗಡೆ ಅವರಿಂದ ಗಣಪತಿ ಸ್ತ್ರೋತ್ರದ ಮೂಲಕ ಕಾರ್ಯಕ್ರಮ ಆರಂಭವಾಯಿತು. ʼಸ್ಪ೦ದನ ಮೆಲೋಡೀಸ್ʼ ನ ರೂವಾರಿ ಶಾ೦ತಾ ಆಚಾರ್ಯ ಹಾಗೂ ತ೦ಡದ ವಿಶ್ವ ದೇಸಾಯಿ, ಭುಜ೦ಗ ಪಾಟಿಲ್, ಮಹೇಶ ಕುಲ್ಕರ್ಣಿ, ಕವಿತಾ ಜಾಧವ್, ಜ್ಯೋತಿ ಗವಿಮಠ್ ಅವರು ಹಾಡುಗಳನ್ನು ಹಾಡಿದರು. ಇದೇ ವೇಳೆ ಶರಣಗೌಡ ಪಾಟೀಲ ಹಾಗೂ ಮನೋಜ್ ಮಾಲಗತ್ತೆ ಸಹ ಗೀತೆಗಳನ್ನು ಪ್ರಸ್ತುತಪಡಿಸಿದರು. ದಿವ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.