
ಬೆಂಗಳೂರು : ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಮುಂದಾಗಿದ್ದ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಯತ್ನಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಆಯ್ಕೆ ವಿಚಾರವನ್ನು ಬಿಜೆಪಿಯೇ ನೋಡಿಕೊಳ್ಳಲಿದೆ. ಇದರಲ್ಲಿ ಸಂಘ ತಲೆ ಹಾಕುವುದಿಲ್ಲ. ಬಿಜೆಪಿ ಸಂಘವನ್ನು ಕೇಳಿ ನೇಮಕಾತಿ ಮಾಡುವುದಿಲ್ಲ. ಎಂದು ಹೇಳಿದರು.
ಮಹಾರಾಷ್ಟ್ರ ಹಾಗೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರ ಆಪ್ತ ಸಹಾಯಕರನ್ನಾಗಿ ಸಂಘದ ವ್ಯಕ್ತಿಗಳ ನೇಮಕ ಮಾಡಿದ್ದರ ಬಗ್ಗೆ ಸಿದ್ದರಾಮಯ್ಯ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಘ ಯಾರಿಗೂ ಹಾಗೆ ಮಾಡಿ ಎಂದು ಸೂಚನೆ ಕೊಡುವುದಿಲ್ಲ. ಸಂಘದ ಹಿನ್ನೆಲೆಯವರು ಸಚಿವರ ಆಪ್ತ ಸಹಾಯಕರಾದರೆ ಅದು ಅವರ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಮಾತ್ರ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.