ಹಾವೇರಿ :
ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಕೂಡಲೇ ಮಾಹಿತಿ ತರಿಸಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಇಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
ನಂತರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ರಮ ವಹಿಸಬೇಕು ಎಂದರು. 96-97 ರಲ್ಲಿಯೇ ದಿವಂಗತ ಶಾಸಕ ನಾರಾಯಣ ರಾವ್ ಎಸ್.ಟಿ ಗೆ ಸೇರಿಸಲು ಪ್ರಯತ್ನಿಸಿದ್ದರು ಎಂದು ಮರೆಯಬಾರದು ಎಂದರು.
ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು. ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು ಎಂದರು. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ಸಿಎಂ ವಿವರಿಸಿದರು.
*ಸಮಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರೂ ಬರಬೇಕು*
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂದೆ ನಮ್ಮ ಅವಧಿಯಲ್ಲಿಯೇ ಮಾಡಲಾಯಿತು. ಆರ್ಥಿಕ ಶಕ್ತಿ ಇಲ್ಲದ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಸಮಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರೂ ಬರಬೇಕು. ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಎಂಬ ಎರಡು ತತ್ವಗಳನ್ನು ನೀಡಿದ್ದಾರೆ. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಕಾಯಕದಲ್ಲಿ ಎಲ್ಲರೂ ತೊಡಗಿ ಉತ್ಪಾದನೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಇನ್ನೂಬ್ಬರ ಗಳಿಕೆಯನ್ನು ಕುಳಿತು ಅನುಭವಿಸಬಾರದು. ಜಾತಿ ವ್ಯವಸ್ಥೆ ಗೆ ಚಾಲನೆ ಇಲ್ಲದಿರುವುದು ಆರ್ಥಿಕ, ಸಾಮಾಜಿಕ ಚಟುವಟಿಕೆ ಇಲ್ಲದಿರುವುದರಿಂದ. ಇದಕ್ಕೆ ಚಾಲನೆ ನೀಡಬೇಕೆಂದು ಬಸವಾದಿ ಶರಣರು ಹೇಳಿದ್ದರು ಎಂದರು.
*ಮಕ್ಕಳು ಯಾವ ಕಾರಣದಿಂದಲೂ ವಿದ್ಯೆಯಿಂದ ವಂಚಿತರಾಗಬಾರದು*
ಅಂಬಿಗರ ಚೌಡಯ್ಯ ನವರ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ವಿಚಾರಗಳನ್ನು ಜನರಿಗೆ ತಿಳಿಸಲು ಜಯಂತ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.
ನಮ್ಮ ಮಕ್ಕಳು ಯಾವ ಕಾರಣದಿಂದಲೂ ವಿದ್ಯೆಯಿಂದ ವಂಚಿತರಾಗಬಾರದು. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ನಿಲ್ಲಬೇಕಾಗುತ್ತದೆ. ಬದಲಾವಣೆ ಬಯಸದ ಜನ ಆಗಲೂ ಇದ್ದರು, ಈಗಲೂ ಇದ್ದಾರೆ ಎಂದರು. ಮುಖ್ಯ ಮಂತ್ರಿಗಳು ಹಿಂದುಳಿದ ಸಮಾಜದೊಂದಿಗೆ ಸದಾ ಇರುವುದಾಗಿ ಭರವಸೆಯಿತ್ತರು.
ಅಂಬಿಗರ ಚೌಡಯ್ಯ ನವರ ಬಗ್ಗೆ ರಾಷ್ಟ ಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯನ್ನು ಸಿಎಂ ವಾಚಿಸಿದರು.