ಅಂಕೋಲಾ : ಮನೆಯೊಳಗೆ ನುಗ್ಗಿ ದೇವರ ಮೂರ್ತಿಗಳನ್ನು ಕದ್ದೊಯ್ದ ೬ ಜನ ಕುಖ್ಯಾತ ಆರೋಪಿತರನ್ನು ೨೪ ಗಂಟೆಯೊಳಗೆ ಬಂಧಿಸುವಲ್ಲಿ ಅಂಕೋಲಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ನಾಲ್ವರು ಕಾರವಾರದವರು.
ಕದ್ರಾ ಕೆಪಿಸಿ (KPC) ನೌಕರ ಜಿ. ಶ್ರೀನಿವಾಸ ಗುರುಸ್ವಾಮಿ (೪೧), ಧಾರವಾಡ ಲಕ್ಷ್ಮಿಗಿರಿಯ ಹಾಲಿ ಕಾರವಾರದ ಚಿತ್ತಾಕುಲದಲ್ಲಿ ವಾಸವಾಗಿದ್ದ ಅಶೋಕ ಹನುಮಂತಪ್ಪ ಬಂಡಿವಡ್ಡರ (೨೬), ಕದ್ರಾ ರಾಜೀವ ನಗರದ ಮೌಲಾಲಿ ತಂದೆ ಮಹ್ಮದ ಅಜಾದ ಸೈಯದ (೩೦), ಬೆಂಗಳೂರು ವೈಟ್ ಫೀಲ್ಡ್ ಮೂಲದ ಕದ್ರಾ ರಾಜೀವ ನಗರದ ಮುಬಾರಕ ತಂದೆ ಇಬ್ರಾಹಿಂ ಶೇಖ (೨೬), ಬೆಂಗಳೂರು ವೈಟ್ ಫೀಲ್ಡ್ ವಾಸಿ ಎ.ಎಸ್. ಶೇಖ್ ಶರೀಫ್ ತಂದೆ ಎ.ಎಸ್. ಅಬ್ದುಲ್ ರಹೀಮ್ (೩ ಮತು ಮೈಸೂರಿನ ಫುರಖಾನ ತಂದೆ ಮೆಹಬೂಬಖಾನ (೨೨) ಬಂಧಿತ ಆರೋಪಿಗಳು. ಬಂಧಿತರಿಂದ ಇನ್ನೋವಾ ಕ್ರೀಸ್ಟಾ ವಾಹನ, ಮಾರುತಿ ಸುಜುಕಿ , ಜೈಲೋ ಮತ್ತು ಡಿಯೋ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರು ಕೃತ್ಯಕ್ಕೆ ಬಳಸಿದ ವಾಹನಗಳಲ್ಲಿ ಇದ್ದ ಒಟ್ಟು ೧೬ ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿದಿದೆ.
ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳ ವಾಸಿ ಪಿಡಿಓ ವಿಠಲ ವಾಸು ಬಾಂದಿ (೫೮) ಅವರ ಮನೆಯಲ್ಲಿ ಡಿ.೮ರ ೧೧.೩೦ರಿಂದ ಡಿ.೯ರ ೨.೩೦ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಅಂಕೋಲಾ ಠಾಣೆಯ ಪಿಎಸ್ಐ ಜಯಶ್ರೀ ಪ್ರಭಾಕರ ದೂರು ದಾಖಲಿಸಿಕೊಂಡಿದ್ದರು. ಮನೆಯಲ್ಲಿ ಎಲ್ಲರೂ ಮಲಗಿರುವಾಗ, ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ೧.೩೦ ಲಕ್ಷ ರೂಪಾಯಿ ಮೌಲ್ಯದ ಹಿತ್ತಾಳೆಯ ೪೭ ದೇವರ ಮೂರ್ತಿಗಳು, ೫ ಕಪಿಲ್ ಕಲ್ಲುಗುಂಡುಗಳು ಹಾಗೂ ಮನೆಯಲ್ಲಿದ್ದ ಹಳೆಯ ನೋಕಿಯಾ ಮೊಬೈಲ್ ಕಳುವು ಮಾಡಿಕೊಂಡು ಹೋಗಿದ್ದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.