Join The Telegram | Join The WhatsApp |
ಯಲ್ಲಾಪುರ:
ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ (59) ಅವರು ಉತ್ತರ ಕನ್ನಡ ಜಿಲ್ಲೆಯ
ಶಿರಸಿ-ಯಲ್ಲಾಪುರ ಮಧ್ಯದ ರಾಜ್ಯ ಹೆದ್ದಾರಿಯಲ್ಲಿ ಹಿತ್ಳಳ್ಳಿಯಲ್ಲಿ ಬಳಿ ಸಂಭವಿಸಿದ ಅಪಘಾತದಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಯಕ್ಷಗಾನ ಭಾಗವತಿಕೆ ಹಾಗೂ ಸಂಗೀತಗಾರರೂ ಆಗಿದ್ದ ಯಲ್ಲಾಪುರ ತಾಲ್ಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ ಎರಡು ಕಾರುಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ನಿಧನರಾದರು.
ಶಿರಸಿ -ಯಲ್ಲಾಪುರ ರಾಜ್ಯ ಹೆದ್ದಾರಿ ಹಿತ್ಲಳ್ಳಿ ಕ್ರಾಸ್ ಬಳಿ ಅವರಿದ್ದ ಕಾರಿಗೆ, ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರು ತಂದೆ, ತಾಯಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಪ್ರಸಿದ್ಧ ಭಾಗವತರಾಗಿದ್ದ ತಂದೆ ಕೃಷ್ಣ ಭಾಗವತ ಬಾಳೆಹದ್ದ ಅವರಿಂದ ಯಕ್ಷಗಾನ ಭಾಗವತಿಕೆ ಕಲಿತ ಅವರು ನಂತರ ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಹಿಂದುಸ್ಥಾನೀ ಸಂಗೀತವನ್ನೂ ಅಭ್ಯಾಸ ಮಾಡಿದ್ದರು.ಅಲ್ಲದೆ, ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದರು. ತಾವೇ ಮಕ್ಕಳ ತಾಳಮದ್ದಲೆ ಕೂಟ ಸ್ಥಾಪಿಸಿದ್ದರು. ಮಕ್ಕಳಿಗೆ ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆ, ಸಂಗೀತ ಕಲಿಸುತ್ತಿದ್ದ ಅವರು ನಾಟಕ ರಂಗಭೂಮಿಗೆ ಸಂಗೀತವನ್ನೂ ನೀಡುತ್ತಿದ್ದರು. ಸೋಂದಾದ ಯಕ್ಷಬಳಗದಲ್ಲಿಯೂ ಇದ್ದರು. ಅಲ್ಲದೆ ರಂಗಾಯಣ ಮೂಲಕ ಖೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿಯೂ ಇದ್ದರು.
Join The Telegram | Join The WhatsApp |