ಮುಂಬೈ : ದೀಪಿಕಾ ಪಡುಕೋಣೆ ಅವರು ರಣವೀರ್‌ ಸಿಂಗ್‌ ಜೊತೆ ಮದುವೆಯಾಗುವ ಮುನ್ನ ಹಲವು ಸೆಲೆಬ್ರಿಟಿಗಳ ಜೊತೆ ಡೇಟಿಂಗ್‌ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವನೊಬ್ಬನಿದ್ದ, ದೇಶದ ಹಾರ್ಟ್‌ಥ್ರೋಬ್‌ಗಳಲ್ಲಿ ಒಬ್ಬನಾಗಿದ್ದ ಕ್ರಿಕೆಟರ್. ಅವನಿಗಾಗಿ ದೀಪಿಕಾ ಪ್ರೇಮದ ಹುಚ್ಚು ಹಿಡಿದವಳಂತೆ ವರ್ತಿಸಿದ್ದರು. ಇದನ್ನು ಆ ಕ್ರಿಕೆಟರನೇ ಒಂದು ಸಂದರ್ಶನದಲ್ಲಿ ಹೇಳಿದ್ದಾನೆ. ಆತನಿಗಾಗಿ ಆಕೆ ಆಸ್ಟ್ರೇಲಿಯಾ ವರೆಗೆ ಹಿಂಬಾಲಿಸಿ ಬಂದಿದ್ದಳು. ಆ ಘಟನೆಯೂ ಸ್ವಾರಸ್ಯಕರವಾಗಿದೆ. ‌

ಆ ಕ್ರಿಕೆಟರ್‌, ಭಾರತದ ಮಾಜಿ ಬ್ಯಾಟರ್ ಯುವರಾಜ್ ಸಿಂಗ್. ಕ್ರಿಕೆಟ್‌ ಮ್ಯಾಚ್‌ ಸೀರೀಸ್‌ಗಾಗಿ ಆಸ್ಟ್ರೇಲಿಯಾಕ್ಕೆ ಹೊರಟ ವೇಳೆ ಬೇಡ ಬೇಡ ಎಂದರೂ ಆಕೆ ಆತನನ್ನು ಹಿಂಬಾಲಿಸಿ ಹೋಗಿದ್ದಳಂತೆ. ಈಘಟನೆಯನ್ನು ಹೇಳಿರುವ ಯುವರಾಜ್‌ ಸಿಂಗ್‌, ಆ ನಟಿ ಯಾರು ಎಂದು ಹೇಳಿಲ್ಲ. ಆದರೆ ಆ ಅವಧಿಯಲ್ಲಿ ಯುವರಾಜ್-‌ ದೀಪಿಕಾ ಕುಚ್‌ ಕುಚ್‌ ನಡೆಸಿದ್ದರು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಹೆಸರು ಹೇಳದೆಯೇ ನಾವು ಅದು ದೀಪಿಕಾ ಎಂದು ಊಹಿಸಿಕೊಳ್ಳಬಹುದು.

ಇದು ನಡೆದುದು 2008ರಲ್ಲಿ. ಆಗ ಯುವರಾಜ್-‌ ದೀಪಿಕಾ ಪಡುಕೋಣೆ ಡೇಟಿಂಗ್‌ ನಡೆಯುತ್ತಿತ್ತು. ಆಗ ‘ಬಚ್ನಾ ಏ ಹಸೀನೋ’ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿತ್ತು. ಅದರಲ್ಲಿ ದೀಪಿಕಾ ಹೀರೋಯಿನ್‌, ರಣಬೀರ್ ಕಪೂರ್ ಹೀರೋ ಆಗಿದ್ದರು. ಆಗ ಆಸ್ಟ್ರೇಲಿಯಾ- ಭಾರತ ಮ್ಯಾಚ್‌ ಶುರುವಾಯಿತು. ಯುವರಾಜ್ ಜೊತೆ ಸಮಯ ಕಳೆಯಲು ಅನುಕೂಲ ಆಗುವಂತೆ ದೀಪಿಕಾ ತನ್ನ ಚಿತ್ರೀಕರಣದ ತಾಣವನ್ನು ಆಸ್ಟ್ರೇಲಿಯಾದಲ್ಲಿ ಮ್ಯಾಚ್‌ ನಡೆಯುವ ಜಾಗಕ್ಕೆ ಶಿಫ್ಟ್‌ ಮಾಡಿಸಿದರು. ಆ ಕುರಿತು ಯುವರಾಜ್‌ ಸಂದರ್ಶನದಲ್ಲಿ ಹೇಳಿದ್ದು ಹೀಗೆ:

“ನಾನು ಆಗ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ಅವಳ ಹೆಸರು ಬೇಡ. ಅವಳು ತುಂಬಾ ಒಳ್ಳೆಯವಳು ಮತ್ತು ತುಂಬಾ ಅನುಭವಿ. ಅವಳು ಅಡಿಲೇಡ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಳು. ನಮ್ಮ ಮ್ಯಾಚ್‌ ಕ್ಯಾನ್ಬೆರಾದಲ್ಲಿತ್ತು. ನಾನು ಅವಳಿಗೆ ಹೇಳಿದೆ- ನೋಡು, ನಾನು ಕ್ರಿಕೆಟ್‌ ಪ್ರವಾಸದಲ್ಲಿದ್ದೇನೆ. ಅದಕ್ಕೆ ಗಮನಹರಿಸಬೇಕು. ಸ್ವಲ್ಪ ದಿನ ಭೇಟಿಯಾಗಬೇಡ. ಅವಳು ಕೇಳಲಿಲ್ಲ. ಅವಳು ನನ್ನನ್ನು ಬಸ್ಸಿನಲ್ಲಿ ಕ್ಯಾನ್ಬೆರಾಗೆ ಹಿಂಬಾಲಿಸಿದಳು. ಅಲ್ಲಿನ ಎರಡು ಟೆಸ್ಟ್‌ಗಳಲ್ಲಿ ನಾನು ಹೆಚ್ಚು ರನ್ ಗಳಿಸಲಿಲ್ಲ. ನೀನು ಇಲ್ಲಿ ಏನು ಮಾಡ್ತಿದೀಯಾ ಎಂದುಕೇಳಿದರೆ ಅವಳು ‘ನಾನು ನಿನ್ನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ’ ಎಂದಳು.”

“ಹೀಗೆ ನಾನು ಅವಳನ್ನು ರಾತ್ರಿಯಲ್ಲಿ ಭೇಟಿಯಾಗುತ್ತಿದ್ದೆ. ನೀನು ನಿನ್ನ ಕೆರಿಯರ್‌ ಮೇಲೆ ಗಮನ ಕೇಂದ್ರೀಕರಿಸಬೇಕು, ನಾನು ನನ್ನ ಕೆರಿಯರ್‌ ಮೇಲೆ ಕೇಂದ್ರೀಕರಿಸಬೇಕಾಗಿದೆ. ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೆನ್ನಾಗಿ ಪರ್‌ಫಾರ್ಮ್‌ ಮಾಡಬೇಕಿದೆ ಎಂದು ಆಕೆಗೆ ಹೇಳುತ್ತಲೇ ಇದ್ದೆ. ಕೊನೆಗೂ ನಾವು ಕ್ಯಾನ್‌ಬೆರಾದಿಂದ ಅಡಿಲೇಡ್‌ಗೆ ಹೊರಟೆವು. ರಾತ್ರಿ ಅವಳು ನನ್ನ ಸೂಟ್‌ಕೇಸ್ ಅನ್ನು ಪ್ಯಾಕ್ ಮಾಡಿದಳು.”

“ಬೆಳಿಗ್ಗೆ ನನ್ನ ಶೂಗಳು ಕಾಣಲಿಲ್ಲ. ನಾನು ನನ್ನ ಶೂಗಳು ಎಲ್ಲಿವೆ ಎಂದು ಕೇಳಿದೆ. ನಾನು ಅವುಗಳನ್ನು ಪ್ಯಾಕ್ ಮಾಡಿದ್ದೇನೆ ಎಂದು ಅವಳು ಹೇಳಿದಳು. ‘ನಾನು ಬಸ್‌ನಲ್ಲಿ ಹೇಗೆ ಹೋಗಲಿ?’ ಎಂದು ಕೇಳಿದೆ. ಆಗ ಅವಳು ‘ನನ್ನನ್ನು ಚಪ್ಪಲಿ ಧರಿಸಿ’ ಎಂದಳು. ಅವಳ ಬಳಿ ಗುಲಾಬಿ ಬಣ್ಣದ ಸ್ಲಿಪ್-ಆನ್‌ ಇತ್ತು. ‘ಓ ಮೈ ಗಾಡ್‌ʼ ಅಂದೆ. ಕಡೆಗೂ ನಾನು ಆ ಗುಲಾಬಿ ಬಣ್ಣದ ಸ್ಲಿಪ್-ಆನ್‌ಗಳನ್ನು ಧರಿಸಿಯೇ ಹೋಗಬೇಕಾಯ್ತು. ಅವುಗಳನ್ನು ಫ್ರೆಂಡ್ಸ್‌ ದೃಷ್ಟಿಯಿಂದ ಮರೆಮಾಡಲು ನನ್ನ ಬ್ಯಾಗನ್ನು ಅದಕ್ಕೆ ಅಡ್ಡವಾಗಿ ಹಿಡಿದುಕೊಂಡೆ. ಗೆಳೆಯರು ಅದನ್ನು ನೋಡಿಯೃಬಿಟ್ಟರು ಮತ್ತು ತಮಾಷೆ ಮಾಡಿದರು! ಕಡೆಗೆ ನಾನು ವಿಮಾನ ನಿಲ್ದಾಣದಲ್ಲಿ ಫ್ಲಿಪ್-ಫ್ಲಾಪ್‌ ಖರೀದಿಸಿ ಧರಿಸದೆ. ಅಲ್ಲಿವರೆಗೂ ಗುಲಾಬಿ ಸ್ಲಿಪ್-ಆನ್‌ ಧರಿಸಿದ್ದೆ” ಎಂದು ಯುವರಾಜ್ ಹೇಳಿದರು.

ಯುವರಾಜ್ ನಟಿಯ ಹೆಸರನ್ನು ಹಂಚಿಕೊಳ್ಳಲು ಇಂಟರ್ವ್ಯೂನಲ್ಲಿ ನಿರಾಕರಿಸಿದ್ದರು. ಆದರೆ ಯುವರಾಜ್ 2007 ಮತ್ತು 2008ರ ನಡುವೆ ಪ್ರವಾಸದಲ್ಲಿದ್ದಾಗ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ನಡೆಸುತ್ತಿದ್ದರು ಎಂದು ಎಲ್ಲರಿಗೂ ಗೊತ್ತು. ಆಸ್ಟ್ರೇಲಿಯ ಪ್ರವಾಸದಲ್ಲಿ ಯುವರಾಜ್‌ 9 ಓಡಿ ಪಂದ್ಯಗಳಲ್ಲಿ 22.44 ಸರಾಸರಿಯಲ್ಲಿ 1 ಅರ್ಧಶತಕದೊಂದಿಗೆ ಕೇವಲ 202 ರನ್ ಗಳಿಸಿದರು. 2 ಟೆಸ್ಟ್‌ಗಳಲ್ಲಿ 4.25 ರ ಸರಾಸರಿಯಲ್ಲಿ ಕೇವಲ 17 ರನ್ ಗಳಿಸಿ ಶೋಚನೀಯವಾಗಿ ವಿಫಲರಾಗಿದ್ದರು.