ನೈರೋಬಿ : ಕೀನ್ಯಾ ಕ್ರಿಕೆಟ್ ಮಂಡಳಿಯು ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ ಅವರನ್ನು ತಮ್ಮ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಿಸಿದೆ. ಕರ್ನಾಟಕ ವೇಗಿ ಇದೀಗ ಕೀನ್ಯಾ ರಾಷ್ಟ್ರೀಯ ತಂಡದ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್ನಲ್ಲಿ ಕಣಕ್ಕಿಳಿಯಲಿದೆ. ಗಣೇಶ್ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಲಗೈ ಬೌಲರ್ ಆಗಿದ್ದ ಗಣೇಶ ಅವರು, ನಾಲ್ಕು ಟೆಸ್ಟ್‌ಗಳನ್ನು ಆಡಿದ್ದು, ಐದು ವಿಕೆಟ್‌ಗಳ ಪಡೆದಿದ್ದಾರೆ. ಒಂದು ಏಕದಿನದ ಪಂದ್ಯವಾಡಿದ್ದು ಒಂದು ವಿಕೆಟ್ ಪಡೆದಿದ್ದಾರೆ.
ಅವರಿಗೆ ಒಂದು ವರ್ಷದ ಕಾಂಟ್ರಾಕ್ಟ್ ನೀಡಲಾಗಿದೆ. “ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ನನ್ನ ಮೊದಲ ದೃಷ್ಟಿ” ಎಂದು ಕೀನ್ಯಾದ ಮುಖ್ಯ ಕೋಚ್ ಆದ ನಂತರ ಗಣೇಶ ಹೇಳಿದ್ದಾರೆ.
ಕೀನ್ಯಾ ನಾಲ್ಕು ಏಕದಿನದ ಪಂದ್ಯಗಳ ವಿಶ್ವಕಪ್‌ಗಳಲ್ಲಿ (1996, 1999, 2003 ಮತ್ತು 2011) ಮತ್ತು ಒಂದು T20 ವಿಶ್ವಕಪ್(2007)ನಲ್ಲಿ ಪಾಲ್ಗೊಂಡಿದೆ. ಆದರೆ, 2003 ಏಕದಿನದ ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪಿತ್ತು. ಕೀನ್ಯಾ ಸೆಪ್ಟೆಂಬರ್‌ನಲ್ಲಿ ಐಸಿಸಿ ವಿಶ್ವಕಪ್ ಅರ್ಹತಾ ಸ್ಪರ್ಧೆಯಲ್ಲಿ ಪಪುವಾ ನ್ಯೂಗಿನಿಯಾ, ಡೆನ್ಮಾರ್ಕ್, ಕುವೈತ್, ಜರ್ಸಿ ಮತ್ತು ಕತಾರ್ ತಂಡಗಳನ್ನು ಎದುರಸಲಿದೆ.
“ನಾನು ವೃತ್ತಿಪರ ಕೋಚ್ ಆಗಿದ್ದೇನೆ ಮತ್ತು ಇಲ್ಲಿಗೆ ಬರುವ ಮೊದಲು, ನಾನು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳನ್ನು ವೀಕ್ಷಿಸಲು ಯೂಟ್ಯೂಬ್‌ಗೆ ಹೋಗಿದ್ದೆ ಮತ್ತು ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ನಾನು ಹೇಳಬಲ್ಲೆ” ಎಂದು 51 ವರ್ಷ ವಯಸ್ಸಿನ ಗಣೇಶ ಹೇಳಿದ್ದಾರೆ.
ದೊಡ್ಡ ಗಣೇಶ ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು ಮತ್ತು 104 ಪ್ರಥಮ ದರ್ಜೆ ಪಂದ್ಯಗಳಲ್ಲಿ 29.42 ಸರಾಸರಿಯಲ್ಲಿ 20 ಸಲ ಐದು ವಿಕೆಟ್‌ಗಳನ್ನು ಒಳಗೊಂಡಂತೆ 365 ವಿಕೆಟ್‌ಗಳನ್ನು ಪಡೆದಿದ್ದಾರೆ. 89 ಲಿಸ್ಟ್ ಎ ಕ್ರಿಕೆಟ್ ನಲ್ಲಿ 128 ವಿಕೆಟ್‌ಗಳನ್ನು ಪಡೆದಿದ್ದಾರೆ.