
ಪಡುಬಿದ್ರಿ: ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾರಿಯಮ್ಮ ದೇವಿಯ ಭಕ್ತರಾದ ಮುಂಬೈ ಉದ್ಯಮಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ 1.5 ಟನ್ ತೂಕದ ಬೃಹತ್ ಘಂಟೆ ಸಮರ್ಪಿಸಲಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿರುವಂತೆ ಕರ್ನಾಟಕ ರಾಜ್ಯದ ಪ್ರಥಮ, ದೇಶದ ಅತಿ ದೊಡ್ಡ 2ನೇ ಘಂಟೆ ಇದಾಗಿದೆ. 1,500 ಕೆಜಿ ತೂಕ, 5 ಅಡಿ ಎತ್ತರದ ಸಂಪೂರ್ಣ ಕಂಚಿನಿಂದ ನಿರ್ಮಾಣಗೊಂಡಿರುವ ಈ ಗಂಟೆ ಆಂಧ್ರಪ್ರದೇಶದ ಬಿ.ಎಸ್.ಎಂ.ಇ. ಫೌಂಡ್ರಿಸ್ ಕಾರ್ಖಾನೆಯಲ್ಲಿ ಸಿದ್ಧಗೊಂಡಿದೆ. ಕಾಪುವಿಗೆ ಫೆ.7ರಂದು ತಲುಪುವ ಬೃಹತ್ ಘಂಟೆ 9ರಂದು ಸ್ವರ್ಣ ಗದ್ದುಗೆ, ರಜತ ರಥ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯ ಜತೆಗೂಡಿ ಕಾಪು ಮಾರಿಗುಡಿಗೆ ಆಗಮಿಸಲಿದೆ.
ದೇಶದ 2ನೇ ಘಂಟೆಯಾಗಿ ದಾಖಲೆ:
ಮಾರಿಗುಡಿಯಲ್ಲಿ ಬೃಹತ್ ಘಂಟೆ ಅಳವಡಿಸಲು ಪ್ರತ್ಯೇಕ ಸ್ತಂಭಸ್ಥಾಪಿಸಲಾಗಿದ್ದು, ಅಷ್ಟಧಾತು ಬಳಸಿ ಘಂಟೆ ನಿರ್ಮಿಸಲಾಗಿದೆ. 5 ಅಡಿ ಎತ್ತರ, 4 ಅಡಿ ಅಗಲ ಹೊಂದಿರುವ ಗಂಟೆ ಸದ್ದು ಹಲವು ಕಿಲೋಮೀಟರ್ ದೂರದವರೆಗೆ ಕೇಳಲಿದೆ. ಈವರೆಗಿನ ದಾಖಲೆ ಎಂಬಂತೆ ದೇಶದ ಅತಿ ದೊಡ್ಡದಾದ 2,200 ಕಿಲೋ ಗ್ರಾಂ ತೂಕದ ಘಂಟೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿದೆ. ಮಾರಿಗುಡಿಗೆ ಸಮರ್ಪಿಸುವ ಘಂಟೆ ದೇಶದ 2ನೇ ಘಂಟೆಯಾಗಿ ದಾಖಲೆ ಬರೆಯಲಿದೆ.