ದೆಹಲಿ : ಈ ಸಲದ ದೀಪಾವಳಿ ಐತಿಹಾಸಿಕವಾಗಿರಲಿದೆ. 500 ವರ್ಷಗಳ ಕಾಯುವಿಕೆ ನಂತರ ಬಾಲ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಹಬ್ಬದ ದಿನ ಅಸಂಖ್ಯ ದೀಪಗಳು ಬೆಳಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಾಮ ಮನೆಗೆ ಮರಳಿದ ದಿನವೇ ದೀಪಾವಳಿ. ಆದರೆ ರಾಮನ ಬರುವಿಕೆಯ ನಿರೀಕ್ಷೆ ಈ ಬಾರಿ 14 ವರ್ಷಗಳಲ್ಲಿ ಈಡೇರಲಿಲ್ಲ. ಬದಲಿಗೆ 500 ವರ್ಷ ಬೇಕಾಯಿತು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುಮಾರು 12850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಈ ಸಲದ ದೀಪಾವಳಿ ಸದಾ ನೆನಪಿನಲ್ಲಿ ಇಡುವಂತೆ ಇರಲಿದೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಈ ಸಲದ ದೀಪೋತ್ಸವ ಅದ್ವಿತೀಯ ಹಾಗೂ ಅದ್ಬುತವಾಗಿರುತ್ತದೆ ಎಂದು ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ರಾವ್ ತಿಳಿಸಿದ್ದಾರೆ. ರಾಮಾಯಣ ನಡೆದ ಕಾಲಘಟ್ಟವಾದ ತೇತ್ರಾಯುಗದ ಮಾದರಿಯಲ್ಲಿ ಇಲ್ಲಿನ ಪರಿಸರ ಭಾಸವಾಗುವಂತೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಸುಮಾರು ಒಂದು ಲಕ್ಷ ಜನ ದರ್ಶನಕ್ಕೆ ಬರುತ್ತಿದ್ದಾರೆ ಎಂದು ಅಯೋಧ್ಯೆ ಮೇಯರ್ ತಿಳಿಸಿದ್ದಾರೆ. ಈ ವರ್ಷದ ದೀಪೋತ್ಸವ ಸುಂದರವಾಗಿ ಕಾಣಲು ನಾವು ಕಾತರರಾಗಿದ್ದೇವೆ. ಸುಂದರವಾದ ರೀತಿಯಲ್ಲಿ ಪರಿಸರ ಅಲಂಕೃತಗೊಂಡಿದೆ. ಸ್ಥಳೀಯರಲ್ಲಿ ಉತ್ಸಾಹ ಕಾಣುತ್ತಿದೆ. ಈ ಸ್ಥಳದ ನಿವಾಸಿಯಾಗಿದ್ದಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಸ್ಥಳೀಯ ನಿವಾಸಿ ಪ್ರಜ್ವಲ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮುನ್ನ ಬಾಲರಾಮ ಕೇವಲ ಟೆಂಟ್ ನಲ್ಲಿ ಇರುವುದನ್ನು ಕಂಡು ಬೇಸರವಾಗುತ್ತಿತ್ತು. ಆದರೆ, ಈಗ ಹೊಸ ಮಂದಿರದಿಂದಲೇ ರಾಮ ಪಾಲ್ಗೊಳ್ಳುತ್ತಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದು ಅಯೋಧ್ಯೆಯ ಹನುಮನ್ ಗಿರಿ ದೇವಸ್ಥಾನದ ಅರ್ಚಕ ಮಹಾಂತ ರಾಜುದಾಸ್ ಹೇಳಿದ್ದಾರೆ.