ನವದೆಹಲಿ : ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತರಗತಿಯಲ್ಲಿ ಓದಿದ್ದ ಇಬ್ಬರು ಭಾರತೀಯ ಭೂ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹಾಗೂ ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ನೇಮಕಗೊಂಡಿರುವುದು ವಿಶೇಷವಾಗಿದೆ.

ಇವರಿಬ್ಬರೂ 70ರ ದಶಕದಲ್ಲಿ ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಯಲ್ಲಿ 5 ತರಗತಿಯಲ್ಲಿ ಒಟ್ಟಿಗೆ ಓದಿದ್ದರು. ಶಾಲಾ ದಿನಗಳಿಂದಲೂ ಇವರಿಬ್ಬರೂ ಬಾಂಧವ್ಯದಿಂದ ಇದ್ದಾರೆ. ಜನರಲ್‌ ದ್ವಿವೇದಿ ಅವರ ರೋಲ್‌ ನಂಬರ್‌ 931 ಹಾಗೂ ಅಡ್ಮಿರಲ್‌ ತ್ರಿಪಾಠಿ ಅವರು ರೋಲ್‌ ನಂಬರ್‌ 938 ಆಗಿತ್ತು. ಶಾಲಾ ದಿನಗಳಿಂದಲೇ ಇವರಿಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಜೊತೆಯಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ರಕ್ಷಣಾ ಸಚಿವರ ಅಧಿಕೃತ ವಕ್ತಾರ ಎ. ಭರತ ಭೂಷಣ ಬಾಬು ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದೇ ಶಾಲೆಯ ವಿದ್ಯಾರ್ಥಿಗಳು ನೌಕಾಪಡೆ ಮತ್ತು ಸೇನಾ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಅದ್ಭುತ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. 50 ವರ್ಷಗಳ ನಂತರ ಜೊತೆಯಾಗಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಎರಡು ತಿಂಗಳ ಅಂತರದಲ್ಲಿ ಇಬ್ಬರು ಸಹಪಾಠಿಗಳ ನೇಮಕಾತಿಗಳು ಒಂದೇ ಸಮಯದಲ್ಲಿ ಬಂದಿವೆ. ಅಡ್ಮಿರಲ್‌ ಅವರು ಮೇ 1ರಂದು ಭಾರತೀಯ ನೌಕಾಪಡೆಯ ಕಮಾಂಡ್‌ ಅನ್ನು ವಹಿಸಿಕೊಂಡಿದ್ದರೆ, ಲೆಫ್ಟಿನೆಂಟ್‌ ಜನರಲ್‌ ದ್ವಿವೇದಿ ಇಂದು ತಮ ಹೊಸ ನೇಮಕಾತಿಯನ್ನು ವಹಿಸಿಕೊಳ್ಳಲಿದ್ದಾರೆ.

ಉಪೇಂದ್ರ ದ್ವಿವೇದಿ.. : ಜುಲೈ 1, 1964ರಂದು ಜನಿಸಿದ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಅವರು ಡಿಸೆಂಬರ್‌ 15, 1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮು ಮತ್ತು ಕಾಶ್ಮೀರ ರೈಫಲ್ಸ್‌ ) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಲೆಫ್ಟಿನೆಂಟ್‌ ಜನರಲ್‌ ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್‌ ಆಗಿ ಸುದೀರ್ಘ ಸೇವೆ ಸಲ್ಲಿಸಿದರು, ಅಲ್ಲಿ ಅವರು ಪೂರ್ವ ಲಡಾಖ್‌ನಲ್ಲಿನ ಎಲ್‌ಎಸಿಯಲ್ಲಿನ ಮಿಲಿಟರಿ ಸ್ಟ್ಯಾಂಡ್‌ಫ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಅನುಭವ ಹೊಂದಿದ್ದಾರೆ.ಅವರು ನ್ಯಾಷನಲ್‌ ಡಿಫೆನ್ಸ್ ಕಾಲೇಜ್‌ ಮತ್ತು ಆರ್ಮಿ ವಾರ್‌ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ ಮತ್ತು ವೆಲ್ಲಿಂಗ್‌ಟನ್‌ ಮತ್ತು ಆರ್ಮಿ ವಾರ್‌ ಕಾಲೇಜಿನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ. ಅಧಿಕಾರಿಯು ಡಿಫೆನ್ಸ್‌ ಮತ್ತು ಮ್ಯಾನೇಜ್‌ಮೆಂಟ್‌‍ ಸ್ಟಡೀಸ್‌‍ನಲ್ಲಿ ಎಂ ಫಿಲ್‌ ಮತ್ತು ಸ್ಟ್ರಾಟೆಜಿಕ್‌ ಸ್ಟಡೀಸ್‌‍ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ಅಡ್ಮಿರಲ್‌ ದಿನೇಶ್‌ ತ್ರಿಪಾಠಿ:
1985ರಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲ್ಪಟ್ಟ ಅಡ್ಮಿರಲ್‌ ತ್ರಿಪಾಠಿ, ವಿವಿಧ ನಿರ್ಣಾಯಕ ಕಾರ್ಯಯೋಜನೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸುಮಾರು 40 ವರ್ಷಗಳ ಅನುಭವ ಇರುವ ಅವರು ಫ್ಲಾಗ್‌ ಆಫೀಸರ್‌ ಕಮಾಂಡಿಂಗ್‌ -ಇನ್‌ -ಚೀಫ್‌, ವೆಸ್ಟರ್ನ್‌ ನೇವಲ್‌ ಕಮಾಂಡ್‌ ಮತ್ತು ಕೇರಳದ ಎಝಿಮಲದಲ್ಲಿರುವ ಇಂಡಿಯನ್‌ ನೇವಲ್‌ ಅಕಾಡೆಮಿಯ ಕಮಾಂಡೆಂಟ್‌ ಮುಂತಾದ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಅನುಭವಸ್ಥರು. ಅವರ ವೃತ್ತಿಜೀವನದುದ್ದಕ್ಕೂ, ಅವರು ಐಎನ್‌ಎಸ್‌‍ ವಿನಾಶ್‌, ತ್ರಿಶೂಲ್‌ ಸೇರಿದಂತೆ ಹಲವಾರು ನೌಕಾ ಹಡಗುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅಡ್ಮಿರಲ್ ತ್ರಿಪಾಠಿ ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಪದವೀಧರರಾಗಿದ್ದಾರೆ ಮತ್ತು ಅಮೆರಿಕದ ನೇವಲ್ ವಾರ್ ಕಾಲೇಜಿನಲ್ಲಿ ಪ್ರತಿಷ್ಠಿತ ಕೋರ್ಸ್‌ಗಳನ್ನು ಮಾಡಿದ್ದಾರೆ. ತ್ರಿಪಾಠಿ ಅವರ ಕರ್ತವ್ಯದ ಸಮರ್ಪಣೆಯಿಂದ ಅವರು ಅತಿ ವಿಶಿಷ್ಟ ಸೇವಾ ಪದಕ ಮತ್ತು ನೌಸೇನಾ ಪದಕದಂತಹ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.