ಬೆಳಗಾವಿ: ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಕುಟುಂಬದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಸಂಸದೆ ಮಂಗಲಾ ಅಂಗಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗದೀಶ ಶೆಟ್ಟರ ಅವರು
ಬೀಗರ ಟಿಕೆಟ್‌ ತಪ್ಪಿಸಿದ ಶೆಟ್ಟರ್‌’ ಎಂಬ ಲಕ್ಷ್ಮಿ ಹೆಬ್ಬಾಳಕರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲಕ್ಷ್ಮೀ ಅವರು ಬಗ್ಗೆ ನಾನು ಯಾವುದೇ ಆರೋಪಗಳನ್ನೂ ಈವರೆಗೂ ಮಾಡಿಲ್ಲ. ಆದರೆ, ಜಗದೀಶ ಶೆಟ್ಟರ್‌ ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಅವರು ಬಿಡಬೇಕು. ಘನತೆಯಿಂದ ರಾಜಕಾರಣ ಮಾಡಬೇಕು ಎಂದು ಪ್ರಕಟಣೆ ಮೂಲಕ ದೂರಿದ್ದಾರೆ.

‘ಟಿಕೆಟ್ ಕಿತ್ತುಕೊಂಡಿದ್ದಾರೆ ಎಂಬ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಪ್ರಜ್ಞಾವಂತ ಪ್ರಜೆಯಾಗಿ ಉತ್ತರಿಸಲಾರೆ. ಲಕ್ಷ್ಮಿ ಹೆಬ್ಬಾಳಕರ ಅವರು ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆಯೂ ಆಗಿದ್ದಾರೆ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡವರು ನೀವು. ಆದರೆ, ಈ ವಿಷಯವನ್ನು ಈವರೆಗೆ ನಾವು ಪ್ರಸ್ತಾಪ ಮಾಡಿರಲಿಲ್ಲ. ಜಿಲ್ಲೆಯ ಜನರಿಗೆ ಈ ವಿಷಯ ಚೆನ್ನಾಗಿದೆ ಗೊತ್ತಿದೆ. ಆದ್ದರಿಂದ ಇನ್ನು ಮುಂದೆ ಲಕ್ಷ್ಮಿ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಡಿ ಮಾಡಿಕೊಳ್ಳುವುದು ಒಳಿತು ಎಂದಿದ್ದಾರೆ.

ಈ ಬಾರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ ತಕ್ಷಣ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಸಂತೋಷದಿಂದ ಒಪ್ಪಿಕೊಂಡೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಜನರ ಮನಸಿನಲ್ಲಿ ಸಂಶಯ ಹುಟ್ಟಿಸುವ ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು ಎಂದು ಮಂಗಲಾ ಅಂಗಡಿ ದೂರಿದ್ದಾರೆ.

ಪಕ್ಷ ಮೊದಲು, ಕುಟುಂಬ ನಂತರ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀಯ ಮಾಡಿದೆ. ಸುರೇಶ ಅಂಗಡಿ ಅವರು ಸಹ ಬದುಕಿನುದ್ದಕ್ಕೂ ಬಿಜೆಪಿ ತತ್ವದಂತೆ ಬದುಕಿದ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ ಎಂದಿದ್ದಾರೆ.

ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಂತೆ ಕೇವಲ ಕ್ಷುಲ್ಲಕ ವಿಷಯದ ರಾಜಕಾರಣ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ. ಇನ್ನು ಮುಂದಾದರೂ ರಾಷ್ಟ್ರದ ಅಭಿವೃದ್ಧಿ, ರಾಷ್ಟ್ರೀಯತೆ, ಕರ್ನಾಟಕದ ಅಭಿವೃದ್ಧಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಜನರ ಬೇಕು– ಬೇಡಿಕೆಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದರೆ ಜನರ ಬದುಕು ಹಸನುಗೊಳಿಸುವ ಕೆಲಸ ಆದೀತು ಎಂದು ವಾಗ್ದಾಳಿ ನಡೆಸಿದ್ದಾರೆ.