ಹುಬ್ಬಳ್ಳಿ: ಟ್ಯೂಷನ್ ಹೋಗುವಾಗ ಯುವತಿಯೊಂದಿಗೆ ಸಲುಗೆ ಬೆಳೆಸಿ ನಗದು ಮತ್ತು ಚಿನ್ನಾಭರಣ ತೆಗೆದುಕೊಂಡು ಹೋದ ಬಗ್ಗೆ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ಗಿರೀಶ ಸಾವಂತ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.

ತನ್ನ ಮಗಳಿಂದ ಆರೋಪಿ ಗಿರೀಶ ₹3.30 ಲಕ್ಷ ಮೌಲ್ಯದ ಚಿನ್ನಾಭರಣ, ₹8 ಸಾವಿರ ಪಡೆದುಕೊಂಡು ವಾಪಸ್ ನೀಡಿಲ್ಲ ಎಂದು ವೀರಾಪುರ ಓಣಿಯ ವಿಜಯಲಕ್ಷ್ಮಿ ಮಡಿವಾಳರ ಎಂಬುವರು ದೂರು ನೀಡಿದ್ದಾರೆ.

ಆರು ತಿಂಗಳ ಹಿಂದೆ ನನ್ನ ಮಗಳು ಟ್ಯೂಷನ್ ಗೆ ಹೋಗುತ್ತಿದ್ದಾಗ ಆತ ಅವಳಿಗೆ ಪರಿಚಯವಾಗಿದ್ದ. ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಆತ ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಆಕೆಯಿಂದ ₹ 8 ಸಾವಿರ ಪಡೆದಿದ್ದ. ಮತ್ತೆ ₹90 ಸಾವಿರ ಮೌಲ್ಯದ 15 ಗ್ರಾಂ ತೂಕದ ನೆಕ್ಲಸ್, ₹60 ಸಾವಿರ ಮೌಲ್ಯದ 2 ಉಂಗುರ, ₹60 ಸಾವಿರ ಮೌಲ್ಯದ 10 ಗ್ರಾಂ ತೂಕದ ಜೀರಾಮಣಿ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಗೋರಮಾಳ ಸರ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಎರಡು ಜುಮಕಿ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಜಪ್ತಾ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಪದಕ ಸೇರಿದಂತೆ ₹3.30 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ. ಅದನ್ನು ವಾಪಸ್‌ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದ.16 ವರ್ಷದ ನನ್ನ ಮಗಳು ನಮ್ಮ ಮನೆಯಲ್ಲಿದ್ದ ಚಿನ್ನಾಭರಣ, ನಗದನ್ನು ಆತನಿಗೆ ನೀಡಿದ್ದಾಳೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.