ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಡೆಗಣಿಸಿರುವ ಬಗ್ಗೆ…
ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಹಿರಿತನ ಹೊಂದಿರುವ, ಸುಮಾರು 2000 ವರುಷಗಳಷ್ಟು ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಜನಪದ, ವಚನ, ದಾಸ ಸಾಹಿತ್ಯ ಹೀಗೆ ಹಲವು ಪ್ರಕಾರಗಳಾಗಿ ವಿಂಗಡಿಸಬಹುದು. ಈ ಮಾದರಿಯಂತೆ ಗುರುತಿಸಬಹುದಾದ ಮತ್ತೊಂದು ಪ್ರಕಾರವೆಂದರೆ ಅದು ಯಕ್ಷಗಾನ ಸಾಹಿತ್ಯ. ಸಾಮಾನ್ಯರ ತಿಳಿವಳಿಕೆಯಲ್ಲಿ ಯಕ್ಷಗಾನ ಸಾಹಿತ್ಯವೆನ್ನುವುದು ರಂಗ ಸಾಹಿತ್ಯ. ರಂಗದ ಆಶಯಗಳನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ಮೂಲಧಾತು ಎನಿಸಿಕೊಂಡು ಅದಕ್ಕೆ ಬೇಕಾದ ಪಠ್ಯವನ್ನು/ನಿರ್ದೇಶನವನ್ನು ಮಾತ್ರ ಒದಗಿಸುತ್ತದೆ ಎಂಬ ಭಾವನೆಯಿದೆ. ಅದು ಸತ್ಯವಾದರೂ ಅದಕ್ಕಿಂತ ಭಿನ್ನವಾದ ನೆಲೆಯಲ್ಲಿ ಅದರ ಸಾಹಿತ್ಯವನ್ನು ಅವಲೋಕಿಸಬಹುದಾಗಿದೆ.
ಸಾಹಿತ್ಯವೆಂದರೆ ಭಾಷೆಯನ್ನು, ಭಾವನೆಗಳನ್ನು , ಸೃಜನಶೀಲತೆಯನ್ನು, ಪಾಂಡಿತ್ಯವನ್ನು ಕೊಡುವ ಪ್ರಬಲ ಮಾಧ್ಯಮ.ಈ ಲಕ್ಷಣಗಳನ್ನು ಯಕ್ಷಗಾನ ಸಾಹಿತ್ಯದಲ್ಲಿಯೂ ಗುರುತಿಸಬಹುದು.
ಇಲ್ಲಿಯ ಸಾಹಿತ್ಯವು ಎರಡು ವಿಭಾಗದಲ್ಲಿ ಹರವಿಕೊಂಡಿದೆ .ಒಂದು ಯಕ್ಷಗಾನದ ಪ್ರದರ್ಶನಕ್ಕೆ ಬೇಕಾದ ಪರಿಧಿಯನ್ನು ಕಟ್ಟಿಕೊಡುವ ಪ್ರಸಂಗ ಸಾಹಿತ್ಯವಾದರೆ ಮತ್ತೊಂದು, ಪ್ರದರ್ಶನಗಳಲ್ಲಿ ಪ್ರಸಂಗದ ಸಾಹಿತ್ಯದ ಆಶಯಗಳನ್ನು ಮೌಖಿಕವಾಗಿ ಸಂಭಾಷಣೆಗಳ ಮೂಲಕವಾಗಿ ಸೃಜನಾತ್ಮಕವಾಗಿ ವಿನ್ಯಾಸಗೊಳಿಸುವ ವಿಧಾನ. ಈ ಎರಡು ಕ್ರಮಗಳು ಕೂಡ ಹಲವು ಶತಮಾನಗಳಿಂದ ಅಸ್ತಿತ್ವವನ್ನು ಹೊಂದಿರುವುದನ್ನು ಗಮನಿಸಬೇಕು. ಇದರ ಜೊತೆಗೆ ಅಚ್ಚ ಕನ್ನಡದಲ್ಲಿಯೇ ಪ್ರತಿಪಾದಿಸುವುದು ಗಮನರ್ಹವಾಗಿದೆ.
ಯಕ್ಷಗಾನ ಸಾಹಿತ್ಯದ ಹಿರಿಮೆ ಗರಿಮೆಗಳನ್ನು ಅವಲೋಕಿಸುವಾಗ ಮಹತ್ತರವಾದ ವಿಚಾರಗಳನ್ನು ತಿಳಿಯಬಹುದಾಗಿದೆ. ಸುಮಾರು 700-800 ವರುಷದ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ ಸಾವಿರಕ್ಕೂ ಅಧಿಕ ಕವಿಗಳನ್ನು ಗುರುತಿಸಬಹುದು. ಆರು ಸಾವಿರಕ್ಕೂ ಅಧಿಕ ಪ್ರಸಂಗಗಳು ರಚನೆಯಾಗಿ, ಸರಿಸುಮಾರು ೧೦ ಲಕ್ಷಕ್ಕೂ ಅಧಿಕ ಸಂಖ್ಯೆಯ ಪದ್ಯಗಳು ರಚನೆಯಾಗಿದೆ. ಇಷ್ಟೇಯಲ್ಲದೇ ನಲವತ್ತಕ್ಕಿಂತ ಹೆಚ್ಚು ಪಿಹೆಚ್ ಡಿ ಪ್ರಬಂಧಗಳು ದಾಖಲಾಗಿದೆ. ಜೊತೆಗೆ ಡಾ|| ಶಿವರಾಮ ಕಾರಂತರು, ಶತಾವಧಾನಿ ಡಾ|| ಆರ್.ಗಣೇಶ್, ಡಾ|| ರಾಘವ ನಂಬಿಯಾರ್, ಡಾ|| ಪ್ರಭಾಕರ ಜೋಷಿ, ಡಾ|| ನಾರಾಯಣ ಶೆಟ್ಟಿ, ಡಾ|| ಕಬ್ಬಿನಾಲೆ ವಸಂತ್ ಭಾರಧ್ವಜ್, ಡಾ|| ಆನಂದರಾಮ ಉಪಾಧ್ಯ, ಡಾ|| ಪಾದೆಕಲ್ಲು ವಿಷ್ಣು ಭಟ್, ಡಾ|| ಜಿ.ಎಸ್ ಭಟ್ ಸಾಗರ ಮುಂತಾದ ವಿದ್ವಾಂಸರು ಯಕ್ಷಗಾನದ ಬಗೆಗೆ ಸಂಶೋಧನ ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆಗಳು, ಚಿಂತನೆಗಳು, ಪತ್ರಿಕೆಗಳಲ್ಲಿ ಬರುವ ಬಿಡಿ ಲೇಖನಗಳು, ಕಲಾವಿದರ ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು,ಕಲಾವಿದರ ಆತ್ಮ ಕಥೆಗಳು, ಚಿತ್ರ ಸಂಪುಟಗಳು, ನಾಲ್ಕೈದು ಯಕ್ಷಗಾನಕ್ಕಾಗಿಯೇ ಇರುವ ಪತ್ರಿಕೆಗಳು ಹೀಗೆ ಎಲ್ಲವು ಸೇರಿ ಅಂದಾಜು ಹತ್ತು ಸಾವಿರದಷ್ಟು ಕೃತಿಗಳು ರಚನೆಯಾಗಿವೆ. ಪ್ರಸಂಗ ರಚನೆ ಕಾರ್ಯವು ಕಳೆದ ಐದಾರು ಶತಮಾನಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ . ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಸಂಖ್ಯೆಯ ಕೃತಿಗಳಿವೆ ಎಂಬುದು ದಾಖಲೆಯೇ ಸರಿ. ಇಷ್ಟಿದ್ದರೂ ಕೂಡ ಕನ್ನಡ ಸಾಹಿತ್ಯವಲಯದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ನೀಡದೆ ಇರುವುದು ಸೋಜಿಗವೆನಿಸುತ್ತದೆ.
ಯಕ್ಷಗಾನ ಸಾಹಿತ್ಯದ ರಚನೆ ಎಂಬುದು ಸುಲಭದ ತುತ್ತಲ್ಲ. ಕವಿ ಕಲಾವಿದನ,ಹಾಡುಗಾರನ, ಪ್ರೇಕ್ಷಕನ ,ಕಥಾಸ್ವರೂಪದ ಕುರಿತು ಸರಿಯಾದ ಅಧ್ಯಯನ ನಡೆಸಿ,ಛಂದಸ್ಸನ್ನು ತಲಸ್ಪರ್ಶಿಯಾಗಿ ಅರಿತು ರಂಗದ ಅಗತ್ಯವನ್ನೂ ತಿಳಿದು ಪ್ರಸಂಗ ಒಂದನ್ನು ಒಂದು ರಾತ್ರಿಯ ಪ್ರದರ್ಶನದ ಅಗತ್ಯಕ್ಕೆ ತಕ್ಕಂತೆ ವಿವಿಧ ರಾಗ ತಾಳ ಮಟ್ಟುಗಳಲ್ಲಿ ಕಟ್ಟಿಕೊಡಬೇಕಾಗುತ್ತದೆ. ಅಂದರೆ ಯಕ್ಷಕವಿ ಒಂದಿಡೀ ರಂಗದ ಸಮಗ್ರ ವಿವರಗಳನ್ನು ಬಲ್ಲವನಾಗಿರುವನಾಗಿರಬೇಕು. ಯಾವುದೋ ಒಂದು ಶೈಲಿಯಲ್ಲಿ ಒಂದಿಡೀ ಕಾವ್ಯವನ್ನು ರಚಿಸುವ ಕವಿವಷ್ಟೇ ಪ್ರತಿಭೆ ಯಕ್ಷ ಕವಿಗೂ ಇರಬೇಕಾಗುತ್ತದೆ. ಗಾನ,ನಟನೆ,ಕವಿತ್ವಗಳ ತ್ರಿವೇಣಿ ಸಂಗಮ ಯಕ್ಷಕಾವ್ಯ.ಇದರ ಕಿಂಚಿತ್ತೂ ಅರಿವಿಲ್ಲದ ಸಾಹಿತ್ಯದ ಅಧ್ವರ್ಯುಗಳು ಯಕ್ಷಗಾನ ಸಾಹಿತ್ಯವನ್ನು ಉಪೇಕ್ಷಿಸುವುದು ಉದಾಸೀನವೋ? ಅವಗಣನೆಯೋ? ಎಂಬುದು ತಿಳಿಯದಾಗಿದೆ.
ಕೆಲವು ಶತಮಾನಗಳ ಹಿಂದೆ ರಚಿತವಾದ ಕೃಷ್ಣ ಸಂಧಾನ, ಭೀಷ್ಮ ವಿಜಯ ಇತ್ಯಾದಿ ಪ್ರಸಂಗಗಳು ಇಂದಿಗೂ ಕೂಡ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಅದರ ಸಾಹಿತ್ಯ. ಅಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಇತ್ಯಾದಿಗಳ ಬಗೆಗೆ ಇಂದಿಗೂ ಚರ್ಚೆಗಳಾಗಿ ಆ ಪ್ರಸಂಗಗಳು ನಿತ್ಯ ನೂತನದಂತೆ ಕಂಗೊಳಿಸುತ್ತದೆ. ಬಹುಶಃ ಇಲ್ಲಿ ನಡೆದಷ್ಟು ಪುರಾಣ/ಸಂಸ್ಕೃತಿ/ಜೀವನ ಇತ್ಯಾದಿ ಚರ್ಚೆಗಳು ಬೇರೆ ಯಾವ ಸಾಹಿತ್ಯದಲ್ಲೂ ನಡೆದಂತೆ ಕಾಣಿಸುವುದಿಲ್ಲ. ಆದರೆ ಇದಾವುದೂ ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಸದೆ ಇರುವುದು ಖೇದಕರ ವಿಚಾರ . ಕೇವಲ ಪ್ರಸಂಗದಲ್ಲಿನ ಸಾಹಿತ್ಯವನ್ನು ಮಾತ್ರ ಗ್ರಹಿಸಿದರೆ ಸಾಲುವುದಿಲ್ಲ. ಅದು ಕಟ್ಟಿಕೊಡುವ ಮೌಖಿಕ ಸಾಹಿತ್ಯವನ್ನು ಸಹ ಅವಲೋಕಿಸುವ ಅಗತ್ಯವಿದೆ. ಒಂದು ಪ್ರದರ್ಶನದ ಪ್ರಸ್ತುತಿಯೂ ಒಂದು ಹೊತ್ತಿಗೆಯು ನೀಡಬಹುದಾಷ್ಟು ಆಶಯಗಳನ್ನು, ವಿಚಾರಗಳನ್ನು, ಒಳನೋಟವನ್ನು ಕೊಡಬಲ್ಲದು. ಹಾಗಾಗಿಯೇ ಇದನ್ನು ಕೇವಲ ಕಲಾ ವಿಮರ್ಶೆಯ ದೃಷ್ಟಿಕೋನದಿಂದ ನೋಡದೆ ಅದು ಪ್ರಚುರಪಡಿಸುವ ಸಾಹಿತ್ಯ, ಬಳಸಿಕೊಳ್ಳುವ ವಿಧಾನಗಳು ಇತ್ಯಾದಿಗಳನ್ನು ಸಹ ಮೌಖಿಕ ಸಾಹಿತ್ಯವಾಗಿ ಹೊರಗಿನಿಂದ ನೋಡುವ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ ವಾರ್ಷಿಕವಾಗಿ ಸರಾಸರಿ ಸುಮಾರು ೧೦ ಸಾವಿರ(ಕಳೆದ ಹತ್ತು ವರುಷಗಳಲ್ಲಿ) ಯಕ್ಷಗಾನ/ತಾಳಮದ್ದಲೆ ಪ್ರದರ್ಶನಗಳು ಸಂಪನ್ನವಾಗಿದೆ. ಹಾಗಾದರೆ ಕಳೆದ ೬/೭ ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಿರುವ ಯಕ್ಷಗಾನವು ಇಲ್ಲಿಯವರೆಗೆ ಒಟ್ಟು ಎಷ್ಟು ಪ್ರದರ್ಶನಗಳನ್ನು ನೀಡಿರಬಹುದು? ಆ ಪ್ರದರ್ಶನಗಳಿಂದ ಸಮಾಜದಲ್ಲಿ ಆದ ಬದಲಾವಣೆಗಳೇನು? ಇದು ಕನ್ನಡ ಸಾಹಿತ್ಯವನ್ನು ಬಳಸಿಕೊಂಡು ಸೃಷ್ಟಿಸಿದ ತಲ್ಲಣಗಳೇನು? ಸಾಂಸ್ಕೃತಿಕ, ಕಲೆ ಹಾಗೂ ಭಾಷೆಯ ಬಗೆಗಿನ ಬೆಳೆಸಿದ ಸಂಸ್ಕಾರಗಳ ಪ್ರಭಾವಗಳೇನು? ಇಂದು ನಾವು ಕನ್ನಡ ಅಸ್ಮಿತೆಯ ಬಗೆಗೆ ಮಾತುಗಳನ್ನು ಆಡುತ್ತೇವೆ. ಆದರೆ ಯಕ್ಷಗಾನ ಪ್ರದರ್ಶನಗೊಳ್ಳುವ ಪ್ರದೇಶಗಳಲ್ಲಿ ಕನ್ನಡ ಜೀವಂತವಾಗಿರುವುದಕ್ಕೆ ಹಾಗೂ ಶತಮಾನಗಳಿಂದ ಅದು ಸಂಸ್ಕಾರಯುತವಾಗಿ ಬೆಳೆಯುವುದಕ್ಕೆ ಯಕ್ಷಗಾನ ನೀಡಿದ ಕೊಡುಗೆಗಳೇನು? ಇಂಥ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಕಾಡುತ್ತವೆ. ಇಂಥ ಪ್ರಶ್ನೆಗಳು ಮಡುಗಟ್ಟಿ ನಿಲ್ಲುವುದಕ್ಕೆ ಕನ್ನಡ ಸಾಹಿತ್ಯ ವಲಯ ಯಕ್ಷಗಾನದ ಬಗೆಗೆ ತಳೆದಿರುವ ನಿಲುವು ಕಾರಣವಾಗಿದೆ. ಹಾಡುಗಬ್ಬಗಳು, ನಾಟಕಗಳು ಕೂಡ ಸಾಹಿತ್ಯವೆಂದು ಕರೆಯಲ್ಪಡುವಾಗ ಅದೇ ಸಾಲಿನಲ್ಲಿಯೇ ನಿಲ್ಲುವ ಯಕ್ಷಗಾನದ ಸಾಹಿತ್ಯವನ್ನು ಕನ್ನಡ ಸಾಹಿತ್ಯ ವಲಯ ಪರಿಗಣಿಸದೇ ಇರುವುದು ಚರ್ಚಿಸುವ ವಿಷಯವಾಗಿದೆ.
ಯಕ್ಷಗಾನಕ್ಕಾಗಿಯೇ ಸರ್ಕಾರದ ಪ್ರತ್ಯೇಕ ಅಕಾಡಮಿಯೇ ಇರುವಾಗ ಯಾಕೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಂದೆ ಮನ್ನಣೆಗಾಗಿ ಕೇಳುತ್ತಿದ್ದೇವೆ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಬಹುದು. ಇದಕ್ಕೆ ಉತ್ತರ ಸರಳ. ಜನ ಸಾಮಾನ್ಯರ ತಿಳಿವಳಿಕೆಯಂತೆ ಇಂದು ಯಕ್ಷಗಾನವು ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಶ್ರೀಮಂತವಾಗಿಯೇ ಉಳಿಸಿಕೊಂಡಿರುವುದಲ್ಲಿ ಯಾವುದೇ ಅನುಮಾನವಿಲ್ಲ. ಪಡುವಲಪಾಯ,ಮೂಡಲಪಾಯ, ಘಟ್ಟದ ಕೋರೆ ಇತ್ಯಾದಿಗಳು ಸೇರಿ ಒಟ್ಟು ಕರ್ನಾಟಕದ 19 ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಜೊತೆಗೆ ಇದರ ಸಹೋದರ ಕಲೆಗಳು ಕರ್ನಾಟಕದಾದ್ಯಂತ ಹರಡಿದೆ. ಆದರೆ ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಬೆಳೆದಿಲ್ಲ ಎಂಬ ಪ್ರಶ್ನೆ ಹಲವು ದಶಕಗಳಿಂದ ಇದೆ. ಯಕ್ಷಗಾನೇತರ ವಲಯದ ಕನ್ನಡಿಗರು ಇದರ ಸಾಹಿತ್ಯ ಮತ್ತು ಸಂಗೀತವನ್ನು ಗಮನಿಸದೇ ಇರುವುದು ಪ್ರಮುಖವಾದ ಕಾರಣ. ಆದ್ದರಿಂದ ಕನ್ನಡದ ಬಗೆಗಾಗಿ ತನ್ನದೇಯಾದ ರೀತಿಯಲ್ಲಿ ಬಳಸುತ್ತ, ಬೆಳೆಸುತ್ತ ಕನ್ನಡ ಅಸ್ಮಿತೆಯನ್ನು ಉಳಿಸುವ ಯಕ್ಷಗಾನ ಮತ್ತು ಅದರ ಸಾಹಿತ್ಯದ ಪ್ರಯತ್ನವನ್ನು ಇಡೀ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ತು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆಗಳಿವೆ. ಜೊತೆಗೆ ನಿರಂತರವಾಗಿ ತನ್ನ ಕಾರ್ಯಚಟುವಟಿಕೆಯ ಭಾಗವಾಗಿ ಸ್ವೀಕರಿಸುವುದಕ್ಕೆ ಮನಸ್ಸು ಮಾಡಬೇಕಿದೆ.
ಇಷ್ಟು ಅಗಾಧವಾದ ಕಾರ್ಯವ್ಯಾಪ್ತಿಯನ್ನು ಹೊಂದಿದ,ಸಾಹಿತ್ಯ ಪ್ರಕಾರವೊಂದು ಕನ್ನಡದಲ್ಲಂತೂ ಇಲ್ಲ! ಅನ್ಯಕಡೆ ತಿಳಿದಿಲ್ಲ.ಆದರೂ ಇಲ್ಲಿಯವರೆಗೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಅರಿವಿಗೇ ಬಾರದೇ ಇರುವುದು ವಿಚಿತ್ರವೆನಿಸುತ್ತದೆ. ಈಗ ಮತ್ತೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ಹತ್ತಿರವಾಗುತ್ತಿದೆ. ಈ ಹಿಂದೆಯೂ ಅನೇಕ ಯಕ್ಷಗಾನ ವಿದ್ವಾಂಸರು ಈ ಬಗ್ಗೆ ನೆನಪಿಸಿದಂತೆ ಕನ್ನಡ ನಾಡಿನ ಹೆಮ್ಮಯ ಕಲೆಯಾದ ಯಕ್ಷಗಾನ ಮತ್ತು ಅದರ ಸಾಹಿತ್ಯವನ್ನು ಸಾಹಿತ್ಯ ವಲಯ ಕಡೆಗಣಿಸಿದ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸುತ್ತಿದ್ದೇವೆ. ಈ ಸಮ್ಮೇಳದಲ್ಲಿಯಾದರೂ ಅದಕ್ಕೊಂದು ನ್ಯಾಯ ಸಮ್ಮತ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇವೆ.
ಧನ್ಯವಾದಗಳು
ಇತಿ
-ಕನ್ನಡ ಹಾಗೂ ಯಕ್ಷಗಾನ ಸಾಹಿತ್ಯ ಅಭಿಮಾನಿಗಳು