ಚೆನ್ನೈ: ಅಕ್ರಮ ವಲಸೆಯನ್ನು ತಡೆಯಲು ಮಧ್ಯಪ್ರಾಚ್ಯ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿ ವೀಸಾ ಹೊಂದಿರುವವರಿಗೆ ವಾಪಸ್ ಟಿಕೆಟ್, ಸುತ್ತಾಡಲು ಕನಿಷ್ಠ ಹಣ ಹಾಗೂ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಆಗಿದ್ದರಷ್ಟೇ ರಾಷ್ಟ್ರದ ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಕಳೆದ ತಿಂಗಳು ಹತ್ತಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕಳುಹಿಸಲಾಗಿದೆ. ಗಡಿಪಾರು ಸಮಸ್ಯೆ ತಡೆಯುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳಿಂದಲೇ ಕಟ್ಟುನಿಟ್ಟಾಗಿ ದಾಖಲಾತಿಗಳನ್ನು ಪರಿಶೀಲಿಸಿ ಯುಎಇ ವಿಮಾನ ಹತ್ತಲು ಅನುಮತಿಸಲಾಗುತ್ತಿದೆ.

ಯುಎಇಯಲ್ಲಿ ದುಬೈ ಹಾಗೂ ಅಬುಧಾಬಿಯಲ್ಲಿ ಇಳಿಯಲು ಪ್ರತ್ಯೇಕ ವೀಸಾ ಪಡೆದುಕೊಳ್ಳುವ ಅಗತ್ಯವಿದ್ದು, ವೀಸಾ ಇದ್ದಲ್ಲಿ ಮಾತ್ರ ವಿಮಾನ ಹತ್ತಲು ಅನುವು ಮಾಡಿ ಕೊಡಲಾಗುತ್ತಿದೆ. ಅಲ್ಲದೆ ಕನಿಷ್ಠ ₹60 ಸಾವಿರ ಹಣ ಇಲ್ಲವೇ ಕ್ರೆಡಿಟ್ ಕಾರ್ಡ್ ಹೊಂದಿದ್ದಲ್ಲಿ ಮಾತ್ರ ವಿಮಾನ ಹತ್ತಲು ಅವಕಾಶ ನೀಡಲಾಗುತ್ತಿದೆ. ಟೂರಿಸಂ ವೀಸಾ ಪಡೆದು ಅಲ್ಲೇ ಉಳಿದುಕೊಳ್ಳುವವರು ಹೆಚ್ಚಾಗುತ್ತಿರುವುದರಿಂದ ಈ ಕ್ರಮ ತೆಗೆದುಕೊಂಡಿದೆ.