ಬೆಂಗಳೂರು: ಇದು ವಿಶ್ವದ ಅತಿದೊಡ್ಡ ನದಿ, ಆದರೆ ಇದೀಗ ಇಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ನದಿಯುಳ್ಳ ಪ್ರದೇಶವನ್ನು ಜಗತ್ತಿನ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ನದಿ ದಿನದಿಂದ ದಿನಕ್ಕೆ ಬತ್ತುತ್ತಿರುವ ಕಾರಣ ಇಲ್ಲಿನ ಪ್ರಾಣಿಗಳು ಸೇರಿದಂತೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಅರಣ್ಯ ಪ್ರದೇಶ ಭಾರತಕ್ಕಿಂತ ಒಂದೂವರೆ ಭಾಗದಷ್ಟು ದೊಡ್ಡದಾಗಿದೆ. ಈ ಭಾಗದಲ್ಲಿರುವ ಜನರು ಅಪಾಯಕಾರಿ ಗಾಳಿಯನ್ನ ಸೇವನೆ ಮಾಡುತ್ತಿರುವ ಆಘಾತಕಾರಿ ಮಾಹಿತಿ ಹೊರ ಬಂದಿದೆ. ಅರಣ್ಯ ಪ್ರದೇಶವು ಕೆಲ ವರ್ಷಗಳಿಂದ ನಿರಂತರವಾಗಿ ಕಾಡ್ಗಿಚ್ಚಿಗೆ ಒಳಗಾಗುತ್ತಿದ್ರೆ, ನದಿಯಲ್ಲಿನ ನೀರಿನ ಪ್ರಮಾಣ ಇಳಿಕೆಯಾಗುತ್ತಿರೋದು ಇಲ್ಲಿನ ಜನರ ಆತಂಕಕ್ಕೆ ಕಾರಣವಾಗುತ್ತಿದೆ.
ನಾವು ಹೇಳುತ್ತಿರೋದು ಅಮೆಜಾನ್ ಅರಣ್ಯ ಪ್ರದೇಶ. ದಟ್ಟವಾದ ಅರಣ್ಯ ಹೊಂದಿರುವ ಕಾರಣ ಇದನ್ನು ಜಗತ್ತಿನ ಶ್ವಾಸಕೋಶ ಎಂದು ಕರೆಯಲಾಗುತಯ್ತದೆ. ಅಮೇಜಾನ್ ಅರಣ್ಯ ಮತ್ತು ಅಲ್ಲಿಯ ನದಿಗಳು ಜೀವಂತವಾಗಿರೋ ಇರೋವರೆಗೂ ಭೂಮಿ ಮೇಲೆ ಮಾನವ ಸಂಕುಲ ಇರುತ್ತೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತವೆ. ಅಮೆಜಾನ್ ಕಾಡು ಹೊಂದಿರುವ ಬ್ರೆಜಿಲ್ ದೇಶ ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಜನರ ಜೀವನ ಬೀದಿಗೆ ಬಂದಿದೆ. ನೀರಿಲ್ಲದೇ ಪ್ರಾಣಿಗಳು ಸಾಯುತ್ತಿವೆ.
ದಕ್ಷಿಣ ಅಮೆರಿಕಾ ಖಂಡದ ಅತಿ ದೊಡ್ಡ ದೇಶವಾಗಿರುವ ಬ್ರೆಜಿಲ್‌ನಲ್ಲಿ 20 ಕೋಟಿಗೂ ಅಧಿಕ ಜನರು ವಾಸವಾಗಿದ್ದಾರೆ. ಅಮೇಜಾನ್ ಅರಣ್ಯ ಪ್ರದೇಶದ ಶೇ.60ರಷ್ಟು ಭಾಗ ಬ್ರೆಜಿಲ್‌ನಲ್ಲಿಯೇ ಬರುತ್ತದೆ. ಹಾಗಾಗಿ ಬ್ರೆಜಿಲ್ ಅತ್ಯಧಿಕ ನೈಸರ್ಗಿಕ ಸಂಪನ್ಮೂಲ ಹೊಂದಿರುವ ದೇಶವಾಗಿದೆ. ಇಷ್ಟು ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬ್ರೆಜಿಲ್‌ನಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಶೇ.60ರಷ್ಟು ಭಾಗ ಬರಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ಆಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಸಂಗ್ರಹ ಇಳಿಕೆಯಾಗುತ್ತಿದ್ದು, ಮಳೆಯಾಗದಿದ್ದರೆ ಬ್ರೆಜಿಲ್‌ನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ದಿಗಳಲ್ಲಿ ನೀರಿಲ್ಲದ ಕಾರಣ ಅಮೆಜಾನ್ ಪ್ರದೇಶದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಕಳೆದ ಎರಡ್ಮೂರು ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ಬಾರಿ ಇಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶದ ಸಮೀಪದಲ್ಲಿರುವ ಸಾವೋಪೋಲೋ ನಗರದ ನಿವಾಸಿಗಳು ಕೆಟ್ಟ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆಯಷ್ಟೇ ಇಲ್ಲಿಯ ನಿವಾಸಿಗಳು ಜಗತ್ತಿನಲ್ಲಿಯೇ ಅತ್ಯಂತ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದರು. ಬ್ರೆಜಿಲ್ ನೆರೆಯ ದೇಶಗಳಲ್ಲಿಯೂ ಮಳೆ ಕೊರತೆ ಉಂಟಾಗಿದ್ದು, ಬರದ ಛಾಯೆ ಆವರಿಸುವ ಆತಂಕ ಎದುರಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಏನು ಮಾಡೋದು ಅಂತ ಇಲ್ಲಿಯ ಸರ್ಕಾರ ಚಿಂತೆಯಲ್ಲಿದೆ.
ಬ್ರೆಜಿಲ್ ಈ ಸ್ಥಿತಿಗೆ ಕಾರಣ ಏನು?
ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಮರಗಳನ್ನು ಕಡಿದು ಜನರು ವ್ಯವಸಾಯ ಮಾಡಲು ಆರಂಭಿಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಸಿ ಜನವಸತಿ ಪ್ರದೇಶಗಳು ನಿರ್ಮಾಣವಾಗುತ್ತಿವೆ. 2004ರಲ್ಲಿ 1.98 ಮಿಲಿಯನ್ ಹೆಕ್ಟೇರ್ ನಷ್ಟು ಕಾಡು ನಾಶ ಮಾಡಲಾಗಿದೆ. ಆನಂತರ 2021ರ ಆಗಸ್ಟ್‌ನಿಂದ 2022ರ ಜುಲೈವರೆಗೆ ಹೆಚ್ಚು ಅರಣ್ಯ ನಾಶವಾಗಿದೆ. ಈ ಅವಧಿಯಲ್ಲಿ ಒಟ್ಟು 11,568 ಚದರ ಕಿಲೋ ಮೀಟರ್, 2023ರಲ್ಲಿ 9,117 ಚ.ಕಿ.ಮೀ.ನಷ್ಟು ಕಾಡನ್ನು ನಾಶ ಮಾಡಲಾಗಿದೆ ಎಂದ ಬ್ರೆಜಿಲ್ ಸರ್ಕಾರವೇ ಮಾಹಿತಿ ನೀಡಿದೆ. ಪ್ರತಿವರ್ಷ ಅಮೆಜಾನ್ ಕಾಡು ಹಂತ ಹಂತವಾಗಿ ನಾಶವಾಗುತ್ತಿದೆ.ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಅತ್ಯಧಿಕ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಹಾಗಾಗಿ ಅರಣ್ಯ ಪ್ರದೇಶವನ್ನು ನಾಶಗೊಳಿಸಲಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದೆ. ಕಾಡಿನ ನಾಶದಿಂದ ಮಳೆಯ ಕೊರತೆ ಉಂಟಾಗಿ ಅಮೆಜಾನ್ ನದಿ ಹಾಗೂ ಅದರ ಉಪನದಿಗಳು ಬರಿದಾಗುತ್ತಿವೆ. ಸಾಮಾನ್ಯವಾಗಿ ಅಂಟ್ಲಾಟಿಕ್ ಸಾಗರದಿಂದ ತೇವಾಂಶ ಹೊತ್ತು ಬರುತ್ತಿದ್ದ ಮೋಡಗಳು ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಮಳೆಯನ್ನು ತರುತ್ತಿದ್ದವು. ಆದರೆ ಮಾರುತಗಳು ತಮ್ಮ ಚಲನೆಯ ದಿಕ್ಕು ಬದಲಿಸಿ ಆಂಡೀಸ್ ಪರ್ವತದಲ್ಲಿ ಮಳೆ ಸುರಿಯಲಾರಂಭಿಸಿವೆ. ಆದ್ರೆ ಈ ವರ್ಷ ಎಲ್ಲವೂ ಬದಲಾಗಿ ಮಳೆಯ ಸಂಪೂರ್ಣ ಕೊರತೆ ಉಂಟಾಗಿದೆ. ಮಳೆಯ ಕೊರತೆ ಉಂಟಾದ್ರೆ ಬ್ರೆಜಿಲ್ ನ ಶೇ.80ರಷ್ಟು ಭಾಗ ಬರಗಾಲ ಎದುರಿಸಬೇಕಾಗುತ್ತದೆ.