ಬೆಳಗಾವಿ : ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನಕ್ಕೆ ಈ ಬಾರಿ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬೆಳಗಾವಿಯಲ್ಲಿ ಗುರುವಾರ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಮುಡಾ ಹಗರಣದ ಕಾರ್ಮೋಡ ಮುಖ್ಯಮಂತ್ರಿ ಅವರ ಕುರ್ಚಿಯನ್ನು ಆವರಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಅವರೇ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದ ಬಗ್ಗೆ ಚರ್ಚಿಸಿದರೆ ಮುಜುಗರವಾಗುತ್ತದೆ ಎಂದು ಅವರು ಪಲಾಯನವಾದ ಮಾಡಿದರು. ಈಗ ಆ ಹಗರಣದಲ್ಲಿ ತಪ್ಪು ಒಪ್ಪಿಕೊಂಡಿದ್ದಾರೆ ಒಟ್ಟಾರೆ ಮುಖ್ಯಮಂತ್ರಿಗಳು ಈಗ ಅಸಹಾಯಕರಾಗಿ ಕಾಣಿಸುತ್ತಿದ್ದಾರೆ. ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಆತ್ಮವಿಶ್ವಾಸ ಕಳೆದುಕೊಂಡಿದ್ದು ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ತಮಗೆ ಬೆಂಬಲ ಕೋರಿ ರಹಸ್ಯ ಸಭೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಸರಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಎಲ್ಲಾ ಸಚಿವರು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ. ಈ ಸರಕಾರ ಕಾಮಗಾರಿಗಳ ಭೂಮಿ ಪೂಜೆ ಮಾಡಿದ್ದನ್ನು ನಾನು ನೋಡಿಲ್ಲ. ಮುಖ್ಯಮಂತ್ರಿಗಳು ಗುದ್ದಲಿಯ ಮುಖವನ್ನೇ ನೋಡಿಲ್ಲ. ಪ್ರಿಯಾಂಕ ಖರ್ಗೆ ಅವರು ನನ್ನ ವಿರುದ್ಧ ಮಾತನಾಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ಗ್ರಾಮ ಪಂಚಾಯಿತಿ ನೌಕರರನ್ನು ಭೇಟಿಯಾಗಲು ಅವರಿಗೆ ಸಮಯವಿಲ್ಲ ಎಂದು ಆರೋಪಿಸಿದರು.