ಪೆರಿಯ, ಕಾಸರಗೋಡು:

ದೇಶದಲ್ಲಿ ಎಲ್ಲಿಯೂ ಇಲ್ಲದ ಭಾಷಾ ವೈವಿಧ್ಯ ಕಾಸರಗೋಡಿನಲ್ಲಿದೆ. ಇಲ್ಲಿ ಒಟ್ಟು 18 ಭಾಷೆಗಳಿದ್ದು 10 ಪ್ರಧಾನ ಭಾಷೆಗಳಾದರೆ ಇನ್ನುಳಿದ ಎಂಟು ಉಪಭಾಷೆಗಳು ಎಂದು ಕಾಸರಗೋಡಿನ ಕನ್ನಡಪರ ಹೋರಾಟಗಾರ, ಕವಿ ರಾಧಾಕೃಷ್ಣ ಉಳಿಯತಡ್ಕ ನುಡಿದರು.

ಇತ್ತೀಚೆಗೆ ಇಲ್ಲಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ‘ಚಂದ್ರಗಿರಿಯ ಮಾತು’ ವಿದ್ಯಾರ್ಥಿ ವೇದಿಕೆಯ 2024-25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸುಮಾರು ಮುನ್ನೂರು ಮಂದಿ ಯಕ್ಷಗಾನ ಪ್ರಸಂಗಕರ್ತರು ಕಾಸರಗೋಡು ಪ್ರದೇಶವೊಂದರಲ್ಲಿಯೇ ಇದ್ದು, ಯಕ್ಷಗಾನ ಪ್ರಸಂಗಗಳನ್ನು ರಚಿಸುವವರಿಗೆ ಕನ್ನಡ ಸಾಹಿತ್ಯದಲ್ಲಿ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯ ಎಚ್ ಮಾತನಾಡಿ, ಕಾಸರಗೋಡಿನ ಕನ್ನಡ ಸಾಹಿತ್ಯ ಪರಂಪರೆ, ಯಕ್ಷಗಾನ ಪರಂಪರೆ, ಇಲ್ಲಿನ ಕನ್ನಡದ ಅಸ್ತಿತ್ವದ ಹೋರಾಟ, ತುಳು ಭಾಷೆ ಸಂಸ್ಕೃತಿಗಳ ಬಗ್ಗೆ ಆಳವಾದ ಅರಿವನ್ನೂ ಪ್ರೀತಿಯನ್ನೂ ಹೊಂದಿರುವವರು ರಾಧಾಕೃಷ್ಣ ಉಳಿಯತಡ್ಕ ಎಂದು ಹೇಳಿದರು. ವಿದ್ಯಾರ್ಥಿ ವೇದಿಕೆಯ ಸಂಚಾಲಕರಾದ ಡಾ. ಪ್ರವೀಣ ಪದ್ಯಾಣ, ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳು, ಡಾ. ಗೋವಿಂದರಾಜು ಕಲ್ಲೂರು ಹಾಗೂ ಚೇತನ್ ಮುಂಡಾಜೆ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮುಖ್ಯ ಅತಿಥಿಗಳ ಜೊತೆ ಸಂವಾದ ಕಾರ್ಯ್ರಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿ ಕಾರ್ಯದರ್ಶಿ ದೀಪ ಸ್ವಾಗತಿಸಿ, ವಿನಯ್ ಎಂ ನಿರೂಪಿಸಿ, ರಕ್ಷಾ ವಂದಿಸಿದರು.