ಮಂಗಳೂರು : ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಭಾನುವಾರ (ನ.17) ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಮೈಸೂರು ಮೂಲದ ಮೂವರು ವಿದ್ಯಾರ್ಥಿನಿಯರಾದ ಕೀರ್ತನಾ ಎನ್. (21), ನಿಶಿತಾ ಎಂ. ಡಿ. (21) ಮತ್ತು ಪಾರ್ವತಿ ಎಸ್. (20) ಎಂದು ಗುರುತಿಸಲಾಗಿದೆ.
ಈ ಮೂವರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ಭಾನುವಾರ ಬೆಳಗ್ಗೆ 10:30ರ ಸುಮಾರಿಗೆ ಈಜುಕೊಳಕ್ಕೆ ಇಳಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾದ ಮತ್ತಿಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಇವರಿಗೆ ಈಜು ಬಾರದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಯುವತಿ ಆಳ ಇದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು, ಅವಳ ರಕ್ಷಣೆಗೆ ಇನ್ನಿಬ್ಬರು ತೆರಳಿದ್ದರು, ಆದರೆ ಈಜು ಬಾರದ ಇವರು ನೀರಿನಲ್ಲಿ ಮುಳುಗಿದ್ದಾರೆ. ನೀರಿಗೆ ಇಳಿಯುವ ಮುನ್ನ ಯುವತಿಯರು, ತಮ್ಮ ಮೋಜಿನ ಆಟದ ಖುಷಿಯನ್ನು ವೀಡಿಯೊ ರೆಕಾರ್ಡ್ ಮಾಡಿಕೊಳ್ಳಲು ಮೊಬೈಲ್ ಅನ್ನು ಈಜುಕೊಳದ ಒಂದು ಬದಿಯಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ.
ರೆಸಾರ್ಟ್ ಸಿಬ್ಬಂದಿ ಈಜುಕೊಳದ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.