ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ದೆಹಲಿ ಚುಕ್ಕಾಣಿ ಹಿಡಿಯಬೇಕು ಎಂದು ಪಣತೊಟ್ಟಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಡೆ, ಕರ್ನಾಟಕದಲ್ಲಿ ಈ ಸಲವು ಅತಿ ಹೆಚ್ಚು ಸ್ಥಾನ ಗೆಲ್ಲುವ ತವಕದಲ್ಲಿದೆ. ಹೀಗಾಗಿ ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರು. ಆದರೆ ವರ್ಷದ ಹಿಂದೆ ಅವರು ಮುಂದಿನ ಚುನಾವಣೆಗೆ ಸ್ಪರ್ಧೆ ನಡೆಸುವುದಿಲ್ಲ ಎಂದು ಹೇಳಿದ್ದರು. ಬದಲಾದ ರಾಜಕಾರಣದಲ್ಲಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದು ಮತ್ತೆ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಅವರಿಗೆ ಮತ್ತೆ ಟಿಕೆಟ್ ನೀಡಲಿದೆಯೇ ಕಾದು ನೋಡಬೇಕಾಗಿದೆ.

ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹೆಸರು ಬೆಳಗಾವಿ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಅದರಲ್ಲೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅವರ ಹೆಸರು ಅಂತಿಮವಾದರೆ ಅಚ್ಚರಿಪಡಬೇಕಾಗಿಲ್ಲ. ಕಳೆದ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಅವರ ಹೆಸರು ಹರಿದಾಡಿತ್ತು. ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಅನಿವಾರ್ಯತೆ ಇರುವಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು ಬಹುತೇಕ ಅವರ ಹೆಸರೇ ಅಂತಿಮವಾಗುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರ ಕಟ್ಟಾ ಶಿಷ್ಯರಲ್ಲಿ ಒಬ್ಬರಾಗಿರುವ ಬಸವರಾಜ ಬೊಮ್ಮಾಯಿ ಅವರ ಹೆಸರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ಅವರು ಹಾವೇರಿ ಜಿಲ್ಲೆಯ ಪ್ರಭಾವಿಗಳನ್ನು ಬಿಜೆಪಿಗೆ ಕರೆತರುವ ಮೂಲಕ ರಣತಂತ್ರ ರೂಪಿಸುತ್ತಿದ್ದಾರೆ. ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹಾಗೂ ಕಳೆದ ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಸ್ಪರ್ಧಿಸಿದ್ದ ಮಾಜಿ ಕಾಂಗ್ರೆಸ್ಸಿಗ ಶಶಿಧರ ಯಲಿಗಾರ ಅವರನ್ನು ಬಿಜೆಪಿಗೆ ಕರೆತಂದು ಪಕ್ಷವನ್ನು ಬಲಿಷ್ಠ ಪಡಿಸುತ್ತಿದ್ದಾರೆ. ಇದು ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ಸೂಚಿಸಿದೆ.

ಹಾಲಿ ಸಂಸದರು ಬದಲಾವಣೆಯಿಲ್ಲದ ಕ್ಷೇತ್ರಗಳಿಗೆ ಏಕೈಕೆ ಹೆಸರು. ವರ್ಚಸ್ಸು, ಸಮರ್ಥರು ಎಂದು ಗುರುತಿಸಿದೆಡೆ ಮೂರು, ಉಳಿದ ಕ್ಷೇತ್ರಗಳಲ್ಲಿ ನಾಲೈದು ಹೆಸರುಗಳು. ಇದು, ರಾಜ್ಯ ಬಿಜೆಪಿ ಫೈನಲ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಖ್ಯಾಂಶಗಳು.
ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಹೆಚ್ಚಿನ ಬದಲಾವಣೆಯನ್ನು ಮಾಡದೆ ಹಾಲಿ ಸಂಸದರಿಗೆ ಬಹುತೇಕರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಕೆಲವೊಬ್ಬರನ್ನು ಹೊರತುಪಡಿಸಿ ಮಿಕ್ಕುಳಿದಂತೆ ಹಾಲಿ ಸಂಸದರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ. ಯಾಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಿ ಬಿಜೆಪಿ ದಯನೀಯ ಸೋಲು ಅನುಭವಿಸಿತ್ತು. ಇದರಿಂದ ಪಾಠ ಕಲಿತಿರುವ ಪಕ್ಷ ಇದೀಗ ಹೊಸಬರ ಬದಲು ಅನುಭವಿ ಸಂಸದರಿಗೆ ಟಿಕೆಟ್ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

ಜೆಡಿಎಸ್‌ ಜತೆಗೆ ಕ್ಷೇತ್ರಗಳ ಹೊಂದಾಣಿಕೆ, ಸೀಟುಗಳ ಹಂಚಿಕೆ ಇದುವರೆಗೆ ಅಂತಿಮವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಅವರು ವಾರದಲ್ಲಿ ಟಿಕೆಟ್ ಅಂತಿಮವಾಗಲಿದೆ ಎಂದು ಹೇಳಿದ್ದಾರೆ. ಇದನ್ನೆಲ್ಲ ವರಿಷ್ಠರ ವಿವೇಚನೆಗೆ ಬಿಟ್ಟಿರುವ ರಾಜ್ಯ ಸಮಿತಿ 28 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿದೆ. ಹಾಲಿ ಸಂಸದರು, ಪರ್ಯಾಯವಾಗಿ ಸಮರ್ಥರಾಗಿರುವ ಏಳೆಂಟು ಕ್ಷೇತ್ರಗಳಿಗೆ ಒಬ್ಬರ ಹೆಸರು, 10-12 ಕ್ಷೇತ್ರಗಳಿಗೆ ಬದಲಾವಣೆ ಸಾಧ್ಯತೆಯ ಕಾರಣಕ್ಕೆ 2-3, ಉಳಿದ ನಾಲೈದು ಕ್ಷೇತ್ರಗಳಿಗೆ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರುಗಳನ್ನು ಅಂತಿಮ ಮಾಡಲಾಗಿದೆ. ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಪ್ರತಾಪಸಿಂಹ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೂ ಕೆಲವರ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅವರು
ಬಿಜೆಪಿಗೆ ಸೇರ್ಪಡೆಯಾಗದ ಕಾರಣ ಸಭೆಯಲ್ಲಿ ಅಧಿಕೃತ ಚರ್ಚೆಗೆ ತಾಂತ್ರಿಕ ತೊಡಕಿದೆ. ಅನೌಪಚಾರಿಕ ಮಾತುಕತೆ ವೇಳೆಯೂ ಮಂಡ್ಯ ಸಂಸದೆ ಹೆಸರು ಚರ್ಚೆಗೆ ಪರಿಗಣನೆಯಾಗಲಿಲ್ಲ. ಮಂಡ್ಯದ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಸಂಸದೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ, ಗ್ರಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾಗಿದ್ದಾರೆ. ಆದರೆ ಪಕ್ಷದ ನಿಯಮಾವಳಿ ಪ್ರಕಾರ ರಾಜ್ಯ ಸಮಿತಿ ಮುಂದೆ ಕೋರಿಕೆ ಸಲ್ಲಿಸಿಲ್ಲ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಬಲವಾದ ಪ್ರತಿಪಾದನೆ ಮಾಡುತ್ತಿದ್ದು ಬಹುತೇಕ ಇಲ್ಲಿ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಕಂಡು ಬಂದಿದೆ. ಒಟ್ಟಾರೆ ಇದೀಗ ಬಿಜೆಪಿ ಯಾರಿಗೆ ಟಿಕೆಟ್ ನೀಡಬಹುದು ಎಂಬ ಕದನ ಕುತೂಹಲ ಎಲ್ಲರಲ್ಲೂ ಮೂಡಿದೆ.