ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ವಿರೋಧಿಸಿದ ಗುಂಪೊಂದು ಪೊಲೀಸರೊಂದಿಗೆ ನಡೆಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಮೊಘಲರು ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಿದ್ದಾರೆ ಎಂಬ ದೂರಿನ ಆಧಾರದ ಮೇಲೆ ನ್ಯಾಯಾಲಯವು ಸಮೀಕ್ಷೆ ನಡೆಸಲು ನೀಡಿದ ಆದೇಶದ ಮೇರೆಗೆ ಮಸೀದಿ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು.
ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಜಮಾಯಿಸಿ ಈ ಕ್ರಮವನ್ನು ವಿರೋಧಿಸಿದರು. ಭಾರೀ ಪೊಲೀಸ್ ಬಂದೋಬಸ್ತ್ ಜೊತೆ ತೆರಳಿದ್ದ ಸಮೀಕ್ಷಾ ತಂಡದ ಮೇಲೆ ಗುಂಪು ಕಲ್ಲು ತೂರಾಟ ನಡೆಸಿತು. ಇದರಿಂದ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ನಂತರ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.
ಪೊಲೀಸರು ಸಾವನ್ನು ದೃಢಪಡಿಸಿದ್ದಾರೆ ಆದರೆ ಅವರ ಗುರುತನ್ನು ಬಹಿರಂಗಪಡಿಸಿಲ್ಲ.
ಭಾನುವಾರ ಬೆಳಗ್ಗೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಗುಂಪು ಪ್ರತಿಭಟನೆಯನ್ನು ಮುಂದುವರೆಸಿತು ಮತ್ತು ಅಂತಿಮವಾಗಿ ಕಲ್ಲು ತೂರಾಟ ಪ್ರಾರಂಭಿಸಿತು.”ನ್ಯಾಯಾಲಯದ ಆದೇಶದ ಮೇರೆಗೆ ಸಂಭಾಲ್‌ನಲ್ಲಿ ಸರ್ವೆ ನಡೆಸಲಾಗುತ್ತಿದ್ದು, ಕೆಲ ಸಮಾಜಘಾತುಕರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಪೊಲೀಸರು ಕಲ್ಲುತೂರಾಟ ಮಾಡಿದವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ. ಕಾನೂನು ಕ್ರಮ” ಎಂದು ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿ ಪ್ರಶಾಂತಕುಮಾರ ಹೇಳಿದ್ದಾರೆ.
ಘರ್ಷಣೆಯ ನಂತರ 18 ಜನರನ್ನು ಬಂಧಿಸಲಾಗಿದೆ ಮತ್ತು ಪ್ರತಿಭಟನಾಕಾರರನ್ನು ಪತ್ತೆಹಚ್ಚಲು ಡ್ರೋನ್ ಸರ್ವೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಸಾಚಾರದ ಹೊರತಾಗಿಯೂ, ಕೋರ್ಟ್ ಆದೇಶದ ಅನುಸಾರ ಅಡ್ವೊಕೇಟ್ ಆಯೋಗವು ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು, ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಮಾಡಲಾಗಿದೆ. ಮತ್ತು ಛಾಯಾಚಿತ್ರ ತೆಗೆಯಲಾಗಿದೆ ಎಂದು ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ ಪೆನ್ಸಿಯಾ ಹೇಳಿದ್ದಾರೆ. ಆಯೋಗವು ತನ್ನ ವರದಿಯನ್ನು ನವೆಂಬರ್ 29 ರಂದು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ತಡೆಯಲು ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನೂ ವಿಧಿಸಲಾಗಿದೆ.
ಇದೇ ರೀತಿಯ ಸಮೀಕ್ಷೆಯನ್ನು ನವೆಂಬರ್ 19 ರಂದು ನಡೆಸಲಾಯಿತು, ಸ್ಥಳೀಯ ಪೊಲೀಸರು ಮತ್ತು ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಜೈನ್ ಅವರ ನ್ಯಾಯಾಲಯದ ಕಂಪ್ಲೇಂಟ್ ಪ್ರಕಾರ ಹರಿ ಹರ ಮಂದಿರವು ಒಮ್ಮೆ ಮಸೀದಿಯ ಸ್ಥಳದಲ್ಲಿ ಇತ್ತು ಮತ್ತು ಮೊಘಲ್ ಚಕ್ರವರ್ತಿ ಬಾಬರ್ ಅದನ್ನು 1529 ರಲ್ಲಿ ಭಾಗಶಃ ಕೆಡವಿದ್ದಾನೆ ಎಂದು ಹೇಳಲಾಗಿದೆ.