ಬೆಂಗಳೂರು : ವಕೀಲರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು ವಕೀಲರ ರಕ್ಷಣೆಗೆ ಸಂಬಂಧಿಸಿದ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ- 2023 ಜಾರಿಗೆ ಬಂದಿದೆ.

ರಾಜ್ಯ ಸರಕಾರ ಜೂನ್ 10 ರಂದು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅಂದಿನಿಂದಲೇ ಕಾಯಿದೆ ಜಾರಿಗೆ ಬರಲಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ನಿಷೇಧಿಸಲಾಗಿದೆ.

ಒಂದೊಮ್ಮೆ ಇಂತಹ ಕೃತ್ಯ ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ಯಾವುದೇ ವ್ಯಕ್ತಿ ನ್ಯಾಯವಾದಿಯ ಮೇಲೆ ಒಂದು ವೇಳೆ ಹಲ್ಲೆ, ಹಿಂಸಾಚಾರ ನಡೆಸಿದರೆ ಅವನ ಮೇಲೆ ಆರು ತಿಂಗಳಿಂದ ಮೂರು ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡ ಭರಿಸಬೇಕಾಗುತ್ತದೆ. ಜೈಲುವಾಸ ಮತ್ತು ದಂಡ ಎರಡರಿಂದ ಶಿಕ್ಷಿತನಾಗಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

2020ರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ದೆಹಲಿ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ವಕೀಲರ ಮೇಲೆ ಹಲ್ಲೆ ನಡೆದಿದ್ದವು. ಈ ಹಿನ್ನೆಲೆಯಲ್ಲಿ ವಕೀಲರು ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹಿಸಿದ್ದರು. ಬೆಳಗಾವಿಯಲ್ಲಿ ಡಿಸೆಂಬರ್ ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಕುರಿತ ಮಾಸುವುದೇ ಮಂಡಿಸಲಾಗಿತ್ತು ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿದ್ದು ರಾಜ್ಯಪಾಲರು ಒಪ್ಪಿಗೆ ನೀಡಿದರು. ಇದೀಗ ನೂತನ ಕಾಯ್ದೆ ಗೆಜೆಟ್ ಅಧಿಸೂಚನೆ ಮೂಲಕ ಜಾರಿಯಾಗುತ್ತಿದೆ.