ಬಾಗಲಕೋಟೆ : ಬಾಳೆಹೊನ್ನೂರು ಮಠದ ಜಗದ್ಗುರು ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಕಲಾದಗಿ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಸ್ವಾಮೀಜಿಯಿಂದ ಮಠದ ಉಳುಮೆಗೆ ವಿರೋಧಿಸಿ ಅಲ್ಲಿನ ಭಕ್ತರು, ಅವರ ಕಾರನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಆಗ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದಾರೆ. ಶ್ರೀಗಳು ಉಡಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಲಾದಗಿಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿ ಶನಿವಾರ ಈ ಘಟನೆ ನಡೆದಿದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಮಹಿಳೆಯರನ್ನು ಚದುರಿಸಿದರು.‌

ಕಾರ್ಯಕ್ರಮವೊಂದರ ನಿಮಿತ್ತ ಬಾಗಲಕೋಟೆಗೆ ಬಂದಿದ್ದ ಶ್ರೀಶೈಲ ಪೀಠದ ರಂಭಾಪುರಿ ಶ್ರೀಗಳು ಕಲಾದಗಿಯಲ್ಲಿರುವ ಮಠಕ್ಕೆ ಹೊರಟಿದ್ದರು. ಆದರೆ, ಕಲಾದಗಿ ಮಠದ ವಿಚಾರಕ್ಕೆ ಸಂಬಂಧಿಸಿ ವಿವಾದ ಇರುವುದರಿಂದ ಅಲ್ಲಿಗೆ ಹೋಗಬಾರದು ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪದ ಹೊರತಾಗಿಯೂ ಶ್ರೀಗಳು ಅಲ್ಲಿಗೆ ಹೋಗಿದ್ದನ್ನು‌ ಪ್ರತಿಭಟಿಸಿ ದಾಳಿ ನಡೆಸಲಾಗಿದೆ.

ಕಲಾದಗಿ ಗ್ರಾಮದ ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಗುರುಲಿಂಗೇಶ್ವರ ಮಠದ ಪೀಠಾಧಿಪತಿಗಳು 2019ರಲ್ಲಿ ಲಿಂಗೈಕ್ಯರಾಗಿದ್ದರು. ಮುಂದೆ ಪೀಠಾಧಿಪತಿಗಳು ಯಾರಾಗಬೇಕು ಎಂಬ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಇಬ್ಬರು ಶ್ರೀಗಳ ನಡುವೆ ವಿವಾದದಿಂದ ಗುರುಗಳ ಆಯ್ಕೆ ಆಗಿರಲಿಲ್ಲ. ಬದಲಾಗಿ ವಿವಾದ ಕೋರ್ಟ್‌ ಮೆಟ್ಟಿಲು ಹತ್ತಿತ್ತು.

ಈಗ ವಿವಾದ ಕೋರ್ಟ್‌ನಲ್ಲಿರುವುದರಿಂದ ರಂಭಾಪುರಿ ಶ್ರೀಗಳು ಕಲಾದಗಿ ಮಠಕ್ಕೆ ಭೇಟಿ ನೀಡುವುದು ಸರಿಯಲ್ಲ ಎನ್ನುವುದು ವಾದವಾಗಿದೆ. ಶ್ರೀಗಳು ಮಠಕ್ಕೆ ಭೇಟಿ ನೀಡುವುದಲ್ಲದೆ, ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ತಕರಾರು ಎದುರಾಗಿತ್ತು. ಇದೆಲ್ಲದರ ಒಟ್ಟು ಮೊತ್ತವಾಗಿ ಪ್ರತಿಭಟನೆ ಭುಗಿಲೆದ್ದಿತ್ತು.

ಶ್ರೀಗಳು ಕಲಾದಗಿಗೆ ಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ತಡೆಯಲು ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅದರಲ್ಲಿ ಮಹಿಳೆಯರೂ ಸೇರಿದ್ದರು. ಆದರೆ, ಈ ವಿಚಾರ ತಿಳಿದಿದ್ದರೂ ಜನರನ್ನು ಸಮಾಧಾನ ಮಾಡಬಹುದು ಎಂಬ ಉದ್ದೇಶದಿಂದ ಮತ್ತು ಅವರ ಜತೆ ಮಾತನಾಡುವ ಉದ್ದೇಶದಿಂದ ಶ್ರೀಗಳು ಅಲ್ಲಿಗೆ ತೆರಳಿದ್ದರು.

ಆದರೆ, ಕಲಾದಗಿಗೆ ಬರುತ್ತಿದ್ದಂತೆಯೇ ಅವರ ಕಾರನ್ನು ತಡೆಯುವ ಪ್ರಯತ್ನ ನಡೆಯಿತು. ಕಾರು ನಿಲ್ಲಿಸದೆ ಮುಂದೆ ಹೋದಾಗ ಮಹಿಳೆಯೊಬ್ಬರು ಚಪ್ಪಲಿ ತೆಗೆದು ಕಾರಿನ ಮೇಲೆ ಎಸೆದರು. ಕೂಡಲೇ ಅಲ್ಲಿದ್ದ ಭಕ್ತರು ಮಹಿಳೆಯನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದರು.