ತುಮಕೂರು: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಲ್ ಕೊಬ್ಬರಿ ಧಾರಣೆ ₹19 ಸಾವಿರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

2014-15ರಲ್ಲಿ ₹19 ಸಾವಿರ ಗರಿಷ್ಠ ಬೆಲೆ ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಸೋಮವಾರ ಕ್ವಿಂಟಲ್ ಕೊಬ್ಬರಿ ₹19,051ಕ್ಕೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆ ಮುರಿದಿದೆ. ಎಪಿಎಂಸಿ ಮಾರುಕಟ್ಟೆಗೆ 2,704 ಕ್ವಿಂಟಲ್ (6,296 ಚೀಲ) ಕೊಬ್ಬರಿ ಆವಕವಾಗಿದ್ದು, ಕನಿಷ್ಠ ₹16,800ಕ್ಕೆ ಮಾರಾಟವಾಗಿದೆ.

ಕಳೆದ ಕೆಲ ದಿನಗಳಿಂದ ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ನಿಧಾನವಾಗಿ ಏರಿಕೆಯಾಗುತ್ತಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಾರ್ಚ್ 13ರಂದು ನಡೆದ ಹರಾಜಿನಲ್ಲಿ ₹14 ಸಾವಿರಕ್ಕೆ ಹೆಚ್ಚಳ ಗಿತ್ತು. ಮಾರ್ಚ್ 20ರಂದು ₹17 ಸಾವಿರಕ್ಕೆ ಏರಿಕೆಯಾಗಿತ್ತು. ಕೇವಲ ಹತ್ತು ದಿನದ ಅಂತರದಲ್ಲಿ ಕ್ವಿಂಟಲ್‌ಗೆ ₹5 ಸಾವಿರ ಜಿಗಿತ ಕಂಡಿದೆ.

ಬೆಲೆ ಏರಿಕೆಗೆ ಕಾರಣ ಏನು?

ಬೇಡಿಕೆಯಷ್ಟು ಆವಕ ಇಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬರಿ ಹಾಗೂ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ಅದರೊಂದಿಗೆ ಕೇರಳ, ತಮಿಳುನಾಡಿನಲ್ಲೂ ಬೇಡಿಕೆ ಹೆಚ್ಚಾಗಿರುವುದು ಒಮ್ಮೆಲೆ ದರ ಏರಿಕೆಯಾಗುವಂತೆ ಮಾಡಿದೆ ಎನ್ನುವುದು ವರ್ತಕರ ವಿಶ್ಲೇಷಣೆ.

ತೆಂಗಿನ ಜಾಗ ಆಕ್ರಮಿಸುತ್ತಿರುವ ಅಡಿಕೆ

ಸತತ ಬರ, ನೀರಿನ ಕೊರತೆಯಿಂದ ತೆಂಗಿನ ಮರಗಳು ಒಣಗುತ್ತಿದ್ದು, ರೋಗ ಬಾಧೆಯಿಂದ ಇಳುವರಿ ಕುಸಿತವಾಗಿದೆ.

ಎಳನೀರಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಬೆಳೆಗಾರರು ಅತ್ತ ಮುಖ ಮಾಡಿದ್ದಾರೆ. ತೆಂಗು ಪ್ರದೇಶ ವಿಸ್ತರಣೆ ಆಗದಿರುವುದು, ತೆಂಗಿನ ಜಾಗದಲ್ಲಿ ಅಡಿಕೆ ಬೆಳೆ ಕಾಲಿಟ್ಟಿರುವುದು ಕೊಬ್ಬರಿ ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತೆಂಗು ಬೆಳೆಗಾರರು.