ವಂಡಾರು : ಮಂದಾರ್ತಿ ಸನಿಹದ ವಂಡಾರಿನಲ್ಲಿ ನಡೆಯುವ ವಂಡಾರು ಕಂಬಳ ಇತಿಹಾಸ ಪ್ರಸಿದ್ಧ. ಇಲ್ಲಿನ ಹೆಗ್ಡೆ ಮನೆತನದವರು ನೋಡಿಕೊಂಡರೂ ಸಹ ಈ ಕಂಬಳದ ಜವಾಬ್ದಾರಿ ಇಡೀ ಊರಿನ ಮೇಲಿದೆ. ನಿಗದಿತ ದಿನದಂದು ಊರವರೆಲ್ಲ ಒಂದು ಕಡೆ ಸೇರಿ ಕಂಬಳಕ್ಕೆ ಪುರೋಹಿತರ ಮೂಲಕವಾಗಿ ದಿನ ನಿಗದಿ ಪಡಿಸುತ್ತಾರೆ. ಇಲ್ಲಿ ಕಂಬಳ ಗದ್ದೆಯ ಸುತ್ತಮುತ್ತ ಅನೇಕ ದೈವ ದೇವರುಗಳಿದ್ದು, ಈ ದೈವ ದೇವರುಗಳಿಗೆ ಪೂಜೆ ಸಲ್ಲಿಸಿದ ಮೇಲೆ ಕಂಬಳ ಆರಂಭಗೊಳ್ಳುತ್ತದೆ. ನಿಗಳೇಶ್ವರ, ತುಳಸಿಯಮ್ಮ, ಕಾಶಿಯಿಂದ ತಂದ ಪಟ್ಟದ ಮೂರ್ತಿ ಪ್ರಮುಖ ದೇವರಾಗಿ ಈ ಪರಿಸರಕ್ಕೆ ಶ್ರೀ ರಕ್ಷೆ ನೀಡುವ ತಾಣವಾಗಿದೆ. 500 ವರ್ಷಗಳ ಹಿಂದಿನ ಕಂಬಳಗದ್ದೆ ಹೆಗ್ಡೆ ಮನೆಯವರ ಮನೆಯ ಒಳಗೆ ದಾರುಶಿಲ್ಪದ ಕೆತ್ತನೆ ನೋಡುಗರನ್ನು ಆಕರ್ಷಿಸಿದರೆ, ಮತ್ತೊಂದು ಕಡೆ ಉದ್ದಾನುದ್ದ ದನದ ಹಟ್ಟಿ ಸೆಳೆಯುತ್ತದೆ.

 


ಸುಮಾರು ಹತ್ತು ಎಕರೆಗೂ ಅಧಿಕ ವಿಸ್ತೀಣದ ಇಲ್ಲಿನ ಕಂಬಳದ ಗದ್ದೆಯನ್ನು ಪಾಂಡವರು ಒಂದೇ ದಿನದಲ್ಲಿ ನಿರ್ಮಿಸಿದರು ಎನ್ನುವ ಪೌರಾಣಿಕ ಹಿನ್ನೆಲೆ ಈ ಕಂಬಳ ಗದ್ದೆಗೆ ಇದೆ. ಕಂಬಳದ ದಿನ ಭಕ್ತಾದಿಗಳು ಕೈಯಲ್ಲಿ ಅಕ್ಕಿಯನ್ನ ಹಿಡಿದು ಕಂಬಳ ಗದ್ದೆಯ ಸುತ್ತ ಬಿಕ್ಕೂತ್ತ ಬರುವುದು ಇಲ್ಲಿಯ ಒಂದು ವಾಡಿಕೆಯಾಗಿದೆ. ಹಿಂದೆ ಒಂದು ತಿಂಗಳು ಈ ಕಂಬಳ ನಡೆಯುತ್ತಿದ್ದು, ಇಂದು ಬೇರೆ ಬೇರೆ ಧಾರ್ಮಿಕ ವಿಧಿ ವಿಧಾನ ಮೂಲಕ 4 ದಿನಗಳಲ್ಲಿ ಮುಕ್ತಾಯಗೊಳಿಸಲಾಗುತ್ತದೆ.

ಸುಮಾರು 25 ವರ್ಷಗಳಿಂದ ಈ ಎರಡು ಕಂಬಳಕ್ಕೆ ನಾನು ಕೋಣ ತೆಗೆದುಕೊಂಡು ಬರುತ್ತಿದ್ದೇನೆ. ಇಲ್ಲಿಗೆ ಹರಕೆಗಾಗಿ ನಾವು ಬರುತ್ತಿದ್ದು, ವಂಡಾರು ಮತ್ತು ಮಣೂರು ಕಂಬಳ ಗದ್ದೆ ಇಳಿದಾಗ ಏನೋ ಒಂದು ರೀತಿಯ ಸಂತೋಷ ನಮ್ಮನ್ನು ಕಾಡುತ್ತದೆ. ಕಂಬಳ ಗದ್ದೆಗೆ ಇಳಿದು ನೀರಿನ ಪ್ರೋಕ್ಷ ಣೆ ಮಾಡಿ ತೆರಳುವುದು ನಮ್ಮ ಪದ್ದತಿ ಎನ್ನುವುದು ಕೋಣಗಳ ಮಾಲೀಕ ನಾರಾಯಣ ಅವರ ಅಭಿಪ್ರಾಯ.

ಈ ಕಂಬಳದಲ್ಲಿ ಯಾವುದೇ ತಂಡ ಹಾಗೂ ಕೋಣಗಳ ಓಟದಲ್ಲಿ ಸ್ಪರ್ಧೆ ಇರುವುದಿಲ್ಲ. ಅವರು ಸಂಪ್ರದಾಯವಾಗಿ ಬಂದು ಕೋಣ ಓಡಿಸಿ ಹೋಗುತ್ತಾರೆ. ಇಂದಿನ ಆಧುನಿಕ ಯುಗದಲ್ಲೂ ಈ ಸಂಪ್ರದಾಯ ಮುಂದುವರಿಯುತ್ತಿದೆ.

ಅತಿ ಪುರಾತನ ವಂಡಾರು ಸಾಂಪ್ರದಾಯಿಕ ಕಂಬಳ ಡಿ. 6ರಂದು ನಡೆಯಲಿದೆ. ಇಲ್ಲಿ ಯಾವುದೇ ಸ್ಪರ್ಧೆಯ ರೂಪ ದಲ್ಲಿರದೆ, ಹರಕೆಯೇ ಪ್ರಧಾನವಾಗಿ ಕಂಬಳ ನಡೆದು ಕೊಂಡು ಬಂದಿದೆ. ಪಾಂಡವರು ನಿರ್ಮಿ ಸಿದ್ದು ಎಂದು ನಂಬಲಾಗಿರುವ 10 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕಂಬಳ ನಡೆಯಲಿದೆ.ವಂಡಾರಿನ ಹೆಗ್ಡೆ ಮನೆತನದವರು ಈ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ.
ಕಳೆದ 50 ವರ್ಷಗಳಿಂದಲೂ ಈ ಮನೆತನದ ಪಟ್ಟದ ಹೆಗ್ಡೆಯವರಾದ ಪ್ರವೀಣ್‌ ಹೆಗ್ಡೆ ನೇತೃತ್ವದಲ್ಲಿ ಈ ಕಂಬಳ ನಡೆಯುತ್ತಿದೆ. ಮನೆ ದೇವರು ತುಳಸಿ ಅಮ್ಮ, ನಿಗಳೇಶ್ವರನ ಗುಡಿ ಪೂಜೆ ಸಲ್ಲಿಸಲಾಗುತ್ತದೆ. ಡಿ.7ರಂದು ತುಳಸಿ ಅಮ್ಮನಿಗೆ ಗೆಂಡೋತ್ಸವ ನಡೆಯುತ್ತದೆ.

ತಗ್ಗರ್ಸೆ : ಇಲ್ಲಿನ ಕಂಬಳಗದ್ದೆ ಅತ್ಯಂತ ವಿಶಾಲವಾದ ಆಯತಾಕಾರದಿಂದ ಕೂಡಿದೆ. ಈಗೀಗ ಕೋಣಗಳಿಗೆ ಬಹು ಮಾನಗಳಿದ್ದರೂ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಕೈಬಿಡುವುದಿಲ್ಲ. ಸೂತಕ, ಮೈಲಿಗೆಯಾದವರು ಗದ್ದೆಗೆ ಇಳಿಯುವಂತಿಲ್ಲ. ಕೊಲ್ಲೂರು ರಸ್ತೆಯಿಂದ ಉತ್ಸವದ ದಿನ ಕೋಣಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಮಾತ್ರವಲ್ಲದೆ ಬೈಂದೂರು ಭಾಗದ ಹಬ್ಬದಂತೆ ಈ ಉತ್ಸವವನ್ನು ಆಚರಿಸಲಾಗುತ್ತದೆ.
ಜಾನುವಾರುಗಳನ್ನು ಕಂಬಳಗದ್ದೆಗೆ ಸುತ್ತು ಹಾಕಿಸಿ ನೀರಿನ ಪ್ರೋಕ್ಷಣೆ ಮಾಡಲಾಗುತ್ತದೆ.
ಈ ಕಂಬಳವನ್ನು ನಮ್ಮ ಅನಾದಿ ಕಾಲ ದಿಂದಲೂ ಹಿರಿಯರು ನಡೆಸಿ ಕೊಂಡು ಬಂದಿದ್ದು, 65 ವರ್ಷಗಳಿಂದ ನಮ್ಮ ಮುಂದಾಳತ್ವದಲ್ಲಿ ನಡೆಯುತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಕಂಬಳ ನಡೆಯುತ್ತದೆ. ಇದು ಬೈಂದೂರಿನ ಅತಿ ದೊಡ್ಡ ಕಂಬಳೋತ್ಸವವಾಗಿದೆ ಎಂದು ಕಂಬಳ ಮನೆಯವರಾದ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ ಹೇಳುತ್ತಾರೆ.

ವಂಡಾರು ಹೊರತು ಪಡಿಸಿದರೆ ಬೈಂದೂರು ಭಾಗದ ಅತಿ ದೊಡ್ಡ ಕಂಬಳ ಎಂದು ಗುರುತಿ ಸಿಕೊಂಡಿರುವ ತಗ್ಗರ್ಸೆ ಕಂಬಳೋತ್ಸವ ಡಿ. 6ರಂದು ನಡೆಯಲಿದೆ.
ನೂರಾರು ವರ್ಷಗಳ ಇತಿಹಾಸವಿರುವ ತಗ್ಗರ್ಸೆ ಕಂಠದಮನೆ ಟಿ.ನಾರಾಯಣ ಹೆಗ್ಡೆಯವರ ಮನೆಯ ಕಂಬಳ ಸಾಂಪ್ರದಾಯಿಕ ರೀತಿಯಲ್ಲೇ ನಡೆಯಲಿದೆ.
ಸುಮಾರು 5.16 ಎಕ್ರೆ ವಿಸ್ತಿರ್ಣದ ವಿಶಾಲವಾದ ಕಂಬಳಗದ್ದೆಯಿದ್ದು, ಒಂದೇ ದಿನದಲ್ಲಿ ನಾಟಿ ಮಾಡಬೇಕು. ಈ ಗದ್ದೆ ಮೊದಲ ನಾಟಿಯಿಂದ ಸೇರಿ ಪ್ರತಿ ಹಂತದಲ್ಲಿ ಕೊರಗ ಸಮುದಾಯದವರಿಗೆ ವಿಶೇಷ ಪ್ರಾಧಾನ್ಯವಿದೆ. ಕಂಬಳದ ದಿನ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗದ್ದೆಯ ಸುತ್ತ ಇರುವ ಪರಿವಾರ ದೇವರಿಗೆ ಪೂಜೆ ನೀಡಲಾಗುತ್ತದೆ. ಕಂಬಳಗದ್ದೆ ತೋರಣ ಸಿದ್ಧಪಡಿಸಿದ ಬಳಿಕ ನಿಗದಿತ ಮುಹೂರ್ತದಲ್ಲಿ ಧ್ವಜ ನೆಡಲಾಗುತ್ತದೆ.
ಕಂಬಳದಲ್ಲಿ ಈ ಭಾಗದ ಮನೆತನಗಳಾದ ಯಡ್ತರೆ ಮನೆ, ಕಳವಾಡಿಮನೆ, ಮಧ್ದೋಡಿ ಮನೆಯವರಿಗೆ ಮೊದಲ ಪ್ರಾಶಸ್ತ್ಯ. ಒಟ್ಟು 60ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುತ್ತವೆ. ಈಗಿನ ಟಿ. ನಾರಾಯಣ ಹೆಗ್ಡೆ ಮನೆಯವರು 65 ವರ್ಷಗಳಿಂದ ಕಂಬಳವನ್ನು ನಡೆಸಿಕೊಂಡು ಬರುತ್ತಿದ್ದಾರೆ.