ಉಡುಪಿ: ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ರೆಡ್‌ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢ ಶಾಲೆ,ಐಟಿಐ ಹಾಗೂ ಪಿಯುಸಿ ಕಾಲೇಜಿನವರೆಗೆ ಮಂಗಳವಾರ (ಜೂ.17) ಜಿಲ್ಲಾಡಳಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ. ದ್ವಿತೀಯ ಪಿ.ಯು.ಸಿ ಪರೀಕ್ಷೆ-3 ಎಂದಿನಂತೆ ನಡೆಯಲಿದೆ.

ಆದರೆ, ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದಿಲ್ಲ.

ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಈ ಕೆಳಕಂಡ ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧ ಪಟ್ಟವರಿಗೆ ಸಾಮಾನ್ಯ ಸೂಚನೆಯನ್ನು ನೀಡಲಾಗಿದೆ.

1. ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ.

2. ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವ ಸಂಧರ್ಭದಲ್ಲಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುವುವ ಬಗ್ಗೆ, ಗಮನವಹಿಸುವುದು.

3. ಕಠಿಣವಾದ ದಾರಿ ಎಂದರೆ ತೋಡು ಹಳ್ಳಗಳನ್ನು ದಾಟಿ ಬರುವ ಸಂದರ್ಭಗಳು ಇರುವಂತಹ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಸೂಚಿಸಲು ತಿಳಿಸಿದೆ.

4. ದುರ್ಬಲ/ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಕಾಲೇಜುಗಳ ಮುಖ್ಯಸ್ಥರು ಕಾಲೇಜು ಕಟ್ಟಡಗಳ ಸುಸ್ಥಿತಿಯ ಬಗ್ಗೆ, ಗಮನಹರಿಸುವುದು ಹಾಗೂ ಯಾವುದೇ ಅವಘಡಗಳು ಉಂಟಾಗದಂತೆ ಸೂಕ್ತ ಕ್ರಮವಹಿಸುವುದು.

5. ಈಗ ಮಳೆಗಾಗಿ, ಮಂಜಾಗರೂಕತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ.

6. ವಿದ್ಯಾರ್ಥಿಗಳ ಪೋಷಕರು/ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರತೀರಕ್ಕೆ ಹೋಗದಂತೆ ಜಾಗ್ರತೆ ವಹಿಸುವುದು.

7. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು.

8. ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ, ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು.

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ.
ಜೂನ್ 17ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜೂನ್ 17ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ರಜಾ ಅವಧಿಯ ಪಠ್ಯವನ್ನು ಮುಂದಿನ ದಿನದಲ್ಲಿ ಹೊಂದಾಣಿಕೆ ಮಾಡಿಕೊಂಡು ಪಾಠ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.