
ದಿ. ಜಿ ಆರ್ ಕಾಳಿಂಗ ನಾವಡರು ಜೂನ್ 6, 1957ರಲ್ಲಿ ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ರಾಮಚಂದ್ರ ನಾವಡರ ಐದನೇ ಪುತ್ರನಾಗಿ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು. ತಮ್ಮ ಗುರುಗಳಾದ ಶ್ರೀ ನಾರಣಪ್ಪ ಉಪ್ಪೂರುರವರ ಜೊತೆಗೂಡಿ, 1972 ರಲ್ಲಿ, ಅಂದರೆ ಕೇವಲ 14 ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದ ನಾವಡರು, ನಂತರ 1977 ರಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ-ಪೆರ್ಡೂರು ಮೇಳ, ನಂತರ 1978 ರಿಂದ 1990 ರವರೆಗೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ-ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದರು.
ಕಾಳಿಂಗ ನಾವಡರು ಅತೀ ಚಿಕ್ಕ ವಯಸ್ಸಿನಲ್ಲಿ, ಅಂದರೆ ತಮ್ಮ ಒಟ್ಟು ಬದುಕಿನ 33ನೆಯ ವಯಸ್ಸಿನಲ್ಲಿ ಮೇ 27, 1990ರಂದು ರಸ್ತೆ ಅಪಘಾತವೊಂದಲ್ಲಿ ವಿಧಿವಶರಾದರು. ನಾವಡರ ‘ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ………’, ‘ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ……’ ಮುಂತಾದ ಪದ್ಯಗಳನ್ನು ಕೇಳಿದಾಗ ಮೈ ನವಿರೇಳುತ್ತದೆ. ಯಕ್ಷಲೋಕ ಕಂಡು ಕೇಳರಿಯದಿದ್ದ ಕೋಗಿಲೆಯ ಕಂಠ ಸ್ತಬ್ಧವಾಯಿತು. ಇಂದಿಗೂ ಪ್ರತಿಯೊಬ್ಬ ಯಕ್ಷಪ್ರೆಮಿಯ ಹೃದಯದ ಬಡಿತದೊಂದಿಗಿರುವ ಕಾಳಿಂಗ ನಾವಡರು ಎಂದೆಂದಿಗೂ ಅಮರ.
ಇಂದು ಅವರಿರುತ್ತಿದ್ದರೆ, ಊಹಿಸಲೂ ಅಸಾಧ್ಯವಾದ ‘ಯಕ್ಷ ದಾಖಲೆಗಳನ್ನು’ ಅವರು ಮಾಡಿರುತ್ತಿದ್ದರು ಎಂಬುದರಲ್ಲಿ ಸಂಶಯವೇ ಇಲ್ಲ ಹಾಗೂ ನಾವಡರ ಹೆಸರು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿರುತ್ತಿತ್ತು. ಆದರೆ ಯಕ್ಷಪ್ರೇಮಿಗಳ ದೌರ್ಭಾಗ್ಯ, ಅವರನ್ನು ನಾವು ಬೇಗ ಕಳೆದುಕೊಳ್ಳುವಂತಾಯಿತು. ತಮ್ಮ ಗಾನದಿಂದ ನಮಗೆಲ್ಲರಿಗೂ ಸಂತೋಷ, ನೆಮ್ಮದಿ, ಮನರಂಜನೆಯನ್ನು ನೀಡಿದ/ನೀಡುತ್ತಿರುವ ಶ್ರೀ ಕಾಳಿಂಗ ನಾವಡರಿಗೆ ನಾವು ಚಿರಋಣಿ.
📸 ಚಿತ್ರ ಕೃಪೆ – ದಿನೇಶ್ ಹೊಳ್ಳ ಸಾಲಿಗ್ರಾಮ