ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ
ಫಲಿತಾಂಶವನ್ನು ಪ್ರಕಟಿಸುವ ಸಂಬಂಧ ಏ.3ರ ಬುಧವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ಆಯೋಜಿಸಿದೆ ಎಂದು ಹಬ್ಬಿರುವ ಮಾಹಿತಿ ಸುಳ್ಳು ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಯಾರೊ ಕಿಡಿಗೇಡಿಗಳು ಮಂಡಳಿ ಹೆಸರಲ್ಲಿ ನಕಲಿ ಪತ್ರಿಕಾ ಹೇಳಿಕೆಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಮಂಡಳಿಯಿಂದ ಅಂತಹ ಯಾವುದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಲ್ಲ. ದ್ವಿತೀಯ ಪಿಯು ಪರೀಕ್ಷಾ ಮೌಲ್ಯಮಾಪನ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಬಳಿಕ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಪಡಿಸಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ನಕಲಿ ಪತ್ರಿಕಾ ಹೇಳಿಕೆ ಆಧಾರಿಸಿ ಕೆಲ ವೆಬ್‌ಸೈಟ್‌ಗಳಲ್ಲಿ ಈಗಾಗಲೇ ಬುಧವಾರ ಪಿಯು ಫಲಿತಾಂಶ ಎಂಬ ಸುದ್ದಿ ಪ್ರಕಟಿಸಲಾಗಿದೆ. ಸಂಬಂಧಪಟ್ಟವರು ಅಂತಹ ಸುದ್ದಿಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ, ಪೋಷಕರಲ್ಲಿ ಗೊಂದಲ ಸೃಷ್ಟಿಸಿದಂತಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.