ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ…
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರೀ ಗೋವು ನಾನು…..
ಇಂತಹದೊಂದು ಅದ್ಭುತವಾದ ಕವನವನ್ನು ಬರೆದ ಕವಿ ಎಸ್. ಜಿ. ನರಸಿಂಹಾಚಾರ್ ಅವರು ಹೆಚ್ಚಿನವರಿಗೆ ಅಪರಿಚಿತರಾಗಿಯೇ ಉಳಿದಿದ್ದಾರೆ. ಅವರು ಕನ್ನಡ, ಇಂಗ್ಲಿಷ, ಸಂಸ್ಕೃತ, ತಮಿಳು ಭಾಷೆಗಳ ಮಹಾನ್ ವಿದ್ವಾಂಸರು. ಹಳೆಗನ್ನಡದ ಪಂಡಿತರು.
ಎಸ್. ಜಿ. ಎನ್. ಅವರು ಜನಿಸಿದ್ದು ಶ್ರೀರಂಗಪಟ್ಟಣದಲ್ಲಿ.೧೮೬೨ ಸೆಪ್ಟೆಂಬರ್ ೧೧ ರಂದು ಅಳಸಿಂಗಾಚಾರ್ಯ ಮತ್ತು ಸೀತಮ್ಮನವರ ಪುತ್ರನಾಗಿ ಜನಿಸಿದ ಅವರು ಮೈಸೂರಲ್ಲಿ ಬಿ. ಎ. ಪದವಿ ಪಡೆದ ನಂತರ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲೇ ಸರಕಾರಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ, ಕನ್ನಡ ಭಾಷಾಂತರಕಾರರಾಗಿ ಸೇವೆ ಸಲ್ಲಿಸಿದರು. ಕನ್ನಡ ಭಾಷಾಭಿವೃದ್ಧಿ ಸಮಿತಿ, ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿ ಗಳಲ್ಲೂ ಇದ್ದು ಕೆಲಸ ಮಾಡಿದವರು.
ನರಸಿಂಹಾಚಾರ್ಯರು ಅನೇಕ ಕಾವ್ಯ ಹಾಗೂ ಗದ್ಯ ಗ್ರಂಥಗಳನ್ನು ಅನುವಾದಿಸಿದರು, ಪರಿಷ್ಕರಿಸಿ ಪ್ರಕಟಿಸಿದರು. ಗದಾಯುದ್ಧ, ಮಲ್ಲಿನಾಥ ಪುರಾಣ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ, ಲೀಲಾವತಿ ಪ್ರಬಂಧ ಮೊದಲಾವು ಪ್ರಮುಖವಾಗಿವೆ. ಆದಿಪುರಾಣ, ಜಗನ್ನಾಥ ವಿಜಯ ಗ್ರಂಥಗಳನ್ನು ಪರಿಷ್ಕರಿಸಿ ತಂದರು. ಹಲವು ಕನ್ನಡ ಕವಿಗಳಚಂಪೂ, ಗದ್ಯಪದ್ಯ, ನಾಟಕ , ಕೀರ್ತನೆ, ಶತಕ, ನಿಘಂಟುಗಳನ್ನು ಸಂಪಾದಿಸಿ ನೀಡಿದ ಶ್ರೇಯಸ್ಸು ಅವರದು.
ಅವರು ” ಕರ್ನಾಟಕ ಕಾವ್ಯ ಮಂಜರಿ” ಮತ್ತು ” ಕರ್ನಾಟಕ ಕಾವ್ಯ ಕಲಾನಿಧಿ ” ಎಂಬ ಪತ್ರಿಕೆಗಳ ಸಂಪಾದಕರೂ ಆಗಿದ್ದರು. ಮಕ್ಕಳ ಸಾಹಿತ್ಯಕ್ಕೂ ಅವರ ಕೊಡುಗೆ ದೊಡ್ಡದೇ. ಹಿಂದೂ ದೇಶದ ನಾಗರಿಕತೆ , ಬಾಲ ಭೂ ವಿವರಣೆ ಮೊದಲಾದ ಕೃತಿಗಳನ್ನು ಬರೆದರು. ದಿಲೀಪ ಚರಿತೆ, ಅಜನೃಪ ಚರಿತೆ, ಷಟ್ಪದಿ ಕಾವ್ಯಗಳು, ಭಾರತ ವೀರ ಚರಿತೆ, ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ , ಉತ್ತರ ರಾಮ ಚರಿತಂ, ಈಸೋಪನ ನೀತಿ ಕಥೆಗಳು ಇತ್ಯಾದಿ ಕೃತಿಗಳನ್ನು ರಚಿಸಿದರು.
ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ನೇಳನದ ಪ್ರಥಮಾಧ್ಯಕ್ಷರಾಗಿದ್ದ ನರಸಿಂಹಾಚಾರ್ ಅವರು ಕೇವಲ ೪೫ ನೇ ವಯಸ್ಸಿನಲ್ಲೇ ೧೯೦೭ ರ ಡಿಸೆಂಬರ್ ೨೨ ರಂದು ನಿಧನರಾದದ್ದು ಕನ್ನಡ ಸಾಹಿತ್ಯ ಮತ್ತು ವಿದ್ವತ್ ಕ್ಷೇತ್ರಕ್ಕೆ ಆದ ಬಹು ದೊಡ್ಡ ನಷ್ಟವೇ ಸರಿ.
– ಎಲ್. ಎಸ್. ಶಾಸ್ತ್ರಿ