ನನ್ನ ನೆನಪಿನಲ್ಲಿ ಬಾದರಾಯಣನಂತೆ ಭಾರತವ ಸಾರುತಿಹುದಿಲ್ಲಿ…
ಎನ್ನುವ ಹಾಗೆ ಈ ಬಾರ್ಜ್ ಹೊನ್ನಾವರದ ಶರಾವತಿ ತೀರದಲ್ಲಿ ಒಂದು ಕಾಲದ ತನ್ನ ಗತವೈಭವದ ಕಥೆವ್ಯಥೆ ಹೇಳುತ್ತ ನಿಂತುಕೊಂಡಿದೆ. ಬಹುಶಃ ಅಂದು ಹಲವು ವರ್ಷಗಳ ಕಾಲ ಸಾವಿರಾರು ಜನರನ್ನು, ಬಸ್ಸುಕಾರುಗಳನ್ನು ಆಚೆ ದಡದಿಂದ ಈಚೆ, ಈಚೆ ದಡದಿಂದ ಆಚೆ ತಾನೇ ಸಾಗಿಸಿದ್ದೆನೆಂಬ ಹೆಮ್ಮೆ ಅದಕ್ಕಿರಲೂಬಹುದು…

ಇದು ಹೊನ್ನಾವರವೆಂಬ ಐತಿಹಾಸಿಕ ನಗರಿಯ ಗತವೈಭವವೇ ಸರಿ. ಇಡೀ ಉತ್ತರ/ ದಕ್ಷಿಣ ಕನ್ನಡದ ಕೇಂದ್ರ ಸ್ಥಾನವಾಗಿ, ವೈಭವದ ಬಂದರು ಸ್ಥಳವಾಗಿ, ಮೆಣಸಿನಕಾಳು ರಾಣಿ ಚೆನ್ನಭೈರಾದೇವಿಯ ಸಂಭ್ರಮದ ಆಡಳಿತ ಕಂಡ ಈ ಹೊನ್ನಾವರ ಬಂದರು/ ನಗರ ಇಂದು ಆ ಎಲ್ಲ ವೈಭವವನ್ನೂ ಕಳೆದುಕೊಂಡು , ಸೊರಗಿ ಸಣ್ಣದಾಗಿ , ಅಂದಿನ ಆ ವೈಭವದ ದಿನಗಳನ್ನು ಸ್ಮರಿಸುತ್ತ ಕಣ್ಣೀರ್ಗರೆಯುತ್ತಿದೆ. ಹಲವು ಅರಸು ಮನೆತನಗಳು ಆಳಿದ ನೆಲ ಇದು ಎಂದು ಇಂದು ಅನಿಸುವುದೇ ಇಲ್ಲ.

ಆದರೂ ಶರಾವತಿಯ ಸೇತುವೆ ಆಗಿ, ವಾಹನಗಳು ಬಂದುಹೋಗುವ ದಾರಿ ದುರ್ಗಾಕೇರಿ- ಕರ್ಕಿ ಭಾಗದಿಂದ ಪ್ರಭಾತನಗರಕ್ಕೆ ಶಿಫ್ಟ್ ಆಗುವತನಕವೂ ಹೊನ್ನಾವರ ಬಂದರು ಪ್ರದೇಶದಲ್ಲಿ ಜೀವಂತಿಕೆ ಇತ್ತು. ಜನಸಂಚಾರವಿತ್ತು. ಚಟುವಟಿಕೆಗಳಿದ್ದವು. ವ್ಯಾಪಾರ ವ್ಯವಹಾರವಿದ್ದವು. ಸಂಜೆಯಾಯಿತೆಂದರೆ ಸೂರ್ಯಾಸ್ತದ ಸೊಬಗು ಸವಿಯಲು ರಸಿಕರು ಬಂದರಿನತ್ತ ಹೆಜ್ಜೆ ಹಾಕುತ್ತಿದ್ದರು. ಬಂದರು ರಸ್ತೆಯಲ್ಲಿದ್ದ ಕಾಮತ ಹೊಟೆಲಿಗೆ ಭರ್ಜರಿ ವ್ಯಾಪಾರವಿತ್ತು. ಆಗಿನ್ನೂ ಶರಾವತಿಯ ಬಲ ದಂಡೆಯಲ್ಲಿ ರಸ್ತೆಯಿರಲಿಲ್ಲ. ಗೇರುಸೊಪ್ಪೆ ಕಡೆಯ ಹಳ್ಳಿಗಳಿಂದ ಬರುವ ಜನರಿಗೆ ಶರಾವತಿಯ ದೋಣಿ ಪ್ರವಾಸವೇ ಗತಿ. ಇದರಿಂದಾಗಿ ನೂರಾರು ದೋಣಿಗಳು ಬಂದರು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಮೀನಿನ ದೋಣಿಗಳು ಬೇರೆ. ಮಚವೆಗಳಿರುತ್ತಿದ್ದವು. ಒಟ್ಟಿನಲ್ಲಿ ಒಂಥರಾ ಹಗಲು ರಾತ್ರಿ ಗಿಜಿಬಿಜಿ ಇದ್ದೇಇರುತ್ತಿತ್ತು.
ಈಗ ಆ ಭಾಗಕ್ಕೆ ಹೋದರೆ ನಮ್ಮ ಇದ್ದ ಉತ್ಸಾಹವೂ ಕಳೆದುಹೋಗುತ್ತದೆ. ಬೇಸರವಾಗುತ್ತದೆ. ಬಂದರಿನ ಎದುರಿಗೇ ಕಾಣಿಸುತ್ತಿದ್ದ ಅಳಿವೆ ಬಾಯಿ ( ಶರಾವತಿ ಸಮುದ್ರ ಸೇರುವ ಸ್ಥಳ) ಕೆಲವು ಕಿಲೋಮೀಟರುಗಳಷ್ಟು ಉತ್ತರಕ್ಕೆ ಸರಿದುಹೋಗಿ ಮರಳಿನ ದಿಬ್ಬ ನಿರ್ಮಾಣವಾಗಿದೆ. ಶರಾವತಿಯ ನೀರಿನ ಪ್ರಮಾಣ ಕಡಿಮೆಯಾಗಿರುವದರ ಪರಿಣಾಮವಾಗಿ ನದಿಯ ತುಂಬ ಕಾಂಡ್ಲಾವನದ ಕಾಡು ನಡುಗಡ್ಡೆಗಳು ಕಂಡುಬರುತ್ತಿವೆ. ಶರಾವತಿಯೂ ಮೊದಲಿನಂತೆ ಮೈತುಂಬಿಕೊಂಡಿಲ್ಲ. ಸೊರಗಿದ್ದಾಳೆ.
( ಮುಂದುವರಿಯುತ್ತದೆ)

(ಲೇಖನ :ಎಲ್.ಎಸ್. ಶಾಸ್ತ್ರಿ)
(ಚಿತ್ರ: ಶ್ರೀ ರಾಮ ಹೆಗಡೆ)