
ಮಹಾತ್ಮಾ ಗಾಂಧೀಜಿ, ನೆಹರೂ ಮೊದಲಾದವರಿಗಿಂತ ಬಹಳ ಮೊದಲೇ ಟಿಳಕರ ಶಿಷ್ಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡು ಅಂದಿನ ಅಖಿಲ ಭಾರತ ಕಾಂಗ್ರೆಸ್ ಸಂಸ್ಥೆಯಲ್ಲಿ ರಾಷ್ಟ್ರಮಟ್ಟದ ಮಹತ್ವದ ಸ್ಥಾನ ಗಳಿಸಿದ್ದ ಗಂಗಾಧರರಾವ್ ದೇಶಪಾಂಡೆ ಅವರು ಟಿಳಕರ ನಂತರ ಗಾಂಧೀಜಿಯವರ ವಿಶ್ವಾಸಪಾತ್ರರಾಗಿ ಕೆಲಸ ಮಾಡಿದವರು. ಅವರು ಬೆಳಗಾವಿ ತಾಲೂಕಿನ ಹುದಲಿ ಎಂಬ ಗ್ರಾಮದ ದೊಡ್ಡ ಜಮೀನುದಾರರು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಆ ಎಲ್ಲ ಜಮೀನನ್ನು ಕಳೆದುಕೊಳ್ಳಲು ಸಿದ್ಧರಾದ ಅಪ್ಪಟ ದೇಶಪ್ರೇಮಿ. ಅಂದು ದೇಶದ ಆರು ಕಡೆ ಗಾಂಧೀಜಿಯವರ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಆಶ್ರಮಗಳು ಸ್ಥಾಪಿಸಲ್ಪಟ್ಟಿದ್ದವು. ಅವುಗಳಲ್ಲಿ ಗಂಗಾಧರರಾಯರು ಹುದಲಿಯ ಹತ್ತಿರ ಸ್ಥಾಪಿಸಿದ ಕುಮರಿ ಆಶ್ರಮವೂ ಒಂದು. ವಕೀಲರಾಗಿದ್ದ ಅವರು ತಮ್ಮ ವೃತ್ತಿಯನ್ನು ಮಾಡಿಕೊಂಡು ಹೋಗಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಜೈಲಿಗೆ ಹೋದವರು ಅವರು.
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲ ಕಿಡಿ ಹೊತ್ತಿಸಿದ್ದೇ ರಾಯರು. ಬೆಳಗಾವಿ ಜಿಲ್ಲೆಯಂತೂ ಆ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ೧೯೦೬ ರಲ್ಲೇ ಟಿಳಕರಿಂದ ಪ್ರೇರಿತರಾಗಿ ಹೋರಾಟವನ್ನು ಸಂಘಟಿಸಿದ ರಾಯರು ಸ್ವಾತಂತ್ರ್ಯ ಪ್ರಾಪ್ತಿಯತನಕವೂ ದಣಿವಿಲ್ಲದ ಬದುಕು ನಡೆಸಿದರು. ಕಾಂಗ್ರೆಸ್ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಟಿಳಕ, ಗಾಂಧೀಜಿಯವರ ಬಲಗೈ ಬಂಟರಾಗಿ ಕೆಲಸ ಮಾಡಿದರು. ಸ್ವತಃ ಗಾಂಧೀಜಿಯವರು ಹುದಲಿಗೆ ಹಲವು ಸಲ ಬಂದು ವಾರಗಟ್ಟಲೆ ಅಲ್ಲಿ ಉಳಿದಿದ್ದರಲ್ಲದೇ ೧೯೨೪ ರಲ್ಲಿ ಗಾಂಧೀಜಿ ಅಧ್ಯಕ್ಷತೆಯ ಅ. ಭಾ. ಕಾಂಗ್ರೆಸ್ ಅಧಿವೇಶನವನ್ನು ಬೆಳಗಾವಿಯಲ್ಲೇ ಅಭೂತಪೂರ್ವ ರೀತಿಯಲ್ಲಿ ಸಂಘಟಿಸಿದವರು ಗಂಗಾಧರರಾಯರು. ಅದಕ್ಕೇ ಅವರನ್ನು ಜನರು ಕರ್ನಾಟಕ ಸಿಂಹ ಎಂದು ಕರೆದು ಗೌರವಿಸಿದರು. ಅದಕ್ಕೆ ಅವರು ಅರ್ಹರೂ ಆಗಿದ್ದರು.
ರಾಯರ ಶಿಕ್ಷಣ ಬಹುಪಾಲು ಮರಾಠಿಯಲ್ಲೇ ಆಗಿತ್ತಾದ್ದರಿಂದ ಅವರು ಮೊದಮೊದಲು ಮರಾಠಿಯಲ್ಲೇ ಭಾಷಣ ಮಾಡುತ್ತಿದ್ದರು. ಟಿಳಕರು ಅವರಿಗೆ ಕನ್ನಡದಲ್ಲೇ ಮಾತನಾಡಿ ಎಂದು ಸಲಹೆ ಮಾಡಿದಾಗ ಕನ್ನಡದಲ್ಲೇ ಭಾಷಣ ಮಾಡಲು ಆರಂಭಿಸಿದರು. ಅಪ್ಪಟ ಜಾತ್ಯತೀತರಾಗಿದ್ದ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಸಾಕಷ್ಟು ಕೆಲಸ ಮಾಡಿದರು. ಖಾದಿ ಮತ್ತು ಗ್ರಾಮೋದ್ಯೋಗಗಳ ಬೆಳವಣಿಗೆಗೆ ಶ್ರಮಿಸಿದರು. ಅವರು ನಾಲ್ವರು ಮಹಾನ್ ಗುರುಗಳನ್ನು ಪಡೆದ ಭಾಗ್ಯವಂತರು.( ಗೋಪಾಲಕೃಷ್ಣ ಗೋಖಲೆ, ಗುರುದೇವ ರಾನಡೆ, ಟಿಳಕ, ಮತ್ತು ಗಾಂಧೀಜಿ. )
೧೮೭೧ ಮಾರ್ಚ್ ೩೧ ರಂದು ಜನಿಸಿದ ರಾಯರು ೯೦ ವರ್ಷಗಳ ದೀರ್ಘಕಾಲ ಸಿಂಹದಂತೆ ಧೀರೋದಾತ್ತ ಬದುಕು ನಡೆಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದರಾದರೂ ಸ್ವಾತಂತ್ರ್ಯಾನಂತರ ಯಾವ ಅಧಿಕಾರಕ್ಕೂ ಆಶಿಸಲಿಲ್ಲ. ಧುರೀಣ, ಎಂಬ ಪತ್ರಿಕೆಯನ್ನೂ ಅವರು ನಡೆಸಿದರು.
– ಎಲ್. ಎಸ್. ಶಾಸ್ತ್ರಿ