ಮಹಾಕುಂಭನಗರ: ಪ್ರಯಾಗ್‌ರಾಜ್‌ನಲ್ಲಿ
ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಮಾಘಿ ಹುಣ್ಣಿಮೆ, ‘ಕಲ್ಪವಾಸ್’ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲಿದ್ದು, ವಾಹನಗಳ ದಟ್ಟಣೆ ನಿಯಂತ್ರಿಸಲು ಮಹಾಕುಂಭ ನಗರ ವ್ಯಾಪ್ತಿಯನ್ನು ‘ವಾಹನ ಮುಕ್ತ ವಲಯ’ವನ್ನಾಗಿ ಮಾಡಿದ್ದಾರೆ.

ಪುಣ್ಯ ನದಿಯ ತಟದಲ್ಲಿ ನಿಗದಿತ ಕಾಲ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ದೀಕರಣ ಪ್ರಕ್ರಿಯೆಗೆ ‘ಕಲ್ಪವಾಸ್‌’ ಎಂದು ಕರೆಯಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ ‘ಕಲ್ಪವಾಸ್’ ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.

ಅಂದಾಜಿನ ಪ್ರಕಾರ, ತ್ರಿವೇಣಿ ಸಂಗಮದಲ್ಲಿಯೇ 10 ಲಕ್ಷಕ್ಕೂ ಅಧಿಕ ‘ಕಲ್ಪವಾಸ್‌’ನಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಸರ್ಕಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

‘ಮಾಘ ಹುಣ್ಣಿಮೆಯಂದು ನಡೆಸುವ ಪುಣ್ಯಸ್ನಾನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯವರೆಗೆ ಇಡೀ ಮಹಾಕುಂಭ ನಗರವನ್ನು ವಾಹನ ಮುಕ್ತ ವಲಯವಾಗಿ ಮಾಡಲಾಗಿದ್ದು, ತುರ್ತು, ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.