ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಿದ್ದ ದೇಶದ್ರೋಹಿಗಳು, ಇಂದು ಅಧಿಕಾರ ಸಿಕ್ಕ ತಕ್ಷಣ ನಮಗೆ ದೇಶ ಭಕ್ತಿಯ ಪಾಠ ಮಾಡುತ್ತಿರುವುದು ದುರಂತ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಆವರಣದಲ್ಲಿ 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಇಂತಹ ಗೋಮುಖ ವ್ಯಾಘ್ರಗಳಿಂದ ದೇಶವನ್ನು ರಕ್ಷಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವವನ್ನು ಹೊಸ ಜನಾಂಗಕ್ಕೆ ತಿಳಿಸಬೇಕು” ಎಂದು ಕರೆ ನೀಡಿದರು.

“ಸ್ವಾತಂತ್ರ ಹೋರಾಟದಲ್ಲಿ ಸುಮಾರು 6.5 ಲಕ್ಷ ಜನ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ ಎಂಬುದು ನಮ್ಮ ಹೆಗ್ಗಳಿಕೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಧೈರ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ಹೇಳಬೇಕು” ಎಂದು ಹೇಳಿದರು.

“ಶಾಮ ಪ್ರಸಾದ ಮುಖರ್ಜಿ ಅವರು ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಬೇಕು ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದರು. ಇವರ ಹಿಂಬಾಲಕರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿರುವ ಸಾರ್ವಜನಿಕ ವಲಯ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇ ಕಾಂಗ್ರೆಸ್. ಬಿಜೆಪಿ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು. ಅಂದು ಬ್ರಿಟೀಷರ ಪರವಾಗಿ ನಿಂತು ಷಡ್ಯಂತ್ರ ರೂಪಿಸಿದ ಶಕುನಿಗಳು” ಎಂದು ಹೇಳಿದರು.

“ನಮ್ಮೆಲ್ಲರ ಹಿಂಜರಿಕೆಯಿಂದ ಮಹಾತ್ಮಾ ಗಾಂಧೀಜಿ, ನೆಹರು, ಇಂದಿರಾಗಾಂಧಿ, ಸರ್ದಾರ್ ಪಟೇಲ್ ಸೇರಿದಂತೆ ಅನೇಕ ನಾಯಕರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯೇ ಇಲ್ಲ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಇಂದು ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದಲ್ಲಿ ದೇಶವನ್ನು ಒಗ್ಗೂಡಿಸಬೇಕಾಗಿದೆ” ಎಂದರು.

“ಸ್ವಾತಂತ್ರ್ಯ ಹೋರಾಟದಲ್ಲಿ ದಾದಾಬಾಯಿ ನವರೋಜಿ, ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧೀಜಿ, ನೆಹರೂ, ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸರೋಜಿನಿ ನಾಯ್ಡು, ಲಾಲಲಜಪತ ರಾಯ್, ಗೋಪಾಲ ಕೃಷ್ಣ ಗೋಖಲೆ, ಬಿಪಿನ್ ಚಂದ್ರಪಾಲ್ ಸೇರಿದಂತೆ ಅನೇಕರ ಹೋರಾಟವಿದೆ” ಎಂದು ಮಹನೀಯರನ್ನು ಸ್ಮರಿಸಿದರು.

“ಸಾವಿರಾರು ಜನ ತಮ್ಮ ಮನೆ, ಮಠ, ಜೀವನವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ತನು, ಮನ, ಧನ, ಪ್ರಾಣ ಎಲ್ಲವನ್ನು ಅರ್ಪಿಸಿದವರು ಕಾಂಗ್ರೆಸ್ ನವರು. ಅಂದು ಬ್ರಿಟೀಷರ ಗುಲಾಮರಾಗಿದ್ದವರು ಇಂದು ನಕಲಿ ದೇಶಭಕ್ತಿಯ ಮುಖವಾಡ ಧರಿಸಿ ದೇಶವನ್ನು ನಾಶ ಮಾಡುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“ಬ್ರಿಟೀಷರ ವಿರುದ್ಧ ಮೊದಲು ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಕರ್ನಾಟಕ. 1837 ರಲ್ಲಿ ನಡೆದ ಅಮರ ಸುಳ್ಯ ಹೋರಾಟ ಈ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಶಿವಮೊಗ್ಗ ಜಿಲ್ಲೆಯ ಈಸೂರು ಸ್ವಾತಂತ್ರ್ಯವನ್ನು ಘೋಷಿಸಿದ ದೇಶದ ಮೊದಲ ಗ್ರಾಮ. ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಅವರ ನೇತೃತ್ವದಲ್ಲಿ 1930 ರಲ್ಲಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕ ಮತ್ತು ಕನ್ನಡಿಗರ ಕೊಡುಗೆ ಅಪಾರ” ಎಂದರು.

“ಮಹಾತ್ಮಾ ಗಾಂಧಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು 100 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಸಚಿವರಾದ ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕು ಎಂದು ಸರ್ಕಾರ ಚಿಂತನೆ ಮಾಡುತ್ತಿದೆ” ಎಂದರು.

“ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಜೀವನದ ಉಸಿರು. ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದಾರೆ. ಹೃದಯ ಅಸೂಯೆ ಅಥವಾ ದ್ವೇಷದಿಂದ ತುಂಬಿದ್ದರೆ ಅಲ್ಲಿ ಸ್ವಾತಂತ್ರ್ಯ ಇರುವುದಿಲ್ಲ ಎಂದು ನೆಹರು ಅವರು ಹೇಳಿದ್ದಾರೆ” ಎಂದು ತಿಳಿಸಿದರು.

“ಈ ದೇಶಕ್ಕೆ ನೆಹರು ಅವರು ಇಂದಿರಾಗಾಂಧಿಯವರ ಕೊಡುಗೆ ಅಪಾರ. ಉಳುವವನೆ ಭೂಮಿಯ ಒಡೆಯ, ನೂರಾರು ಸಾರ್ವಜನಿಕ ಉದ್ದಿಮೆಗಳು, ನರೇಗಾ ಯೋಜನೆ ಸೇರಿದಂತೆ ನೂರಾರು ಯೋಜನೆಗಳ ಮೂಲಕ ದೇಶ ಕಟ್ಟಿದ್ದಾರೆ” ಎಂದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾತಂತ್ರ್ಯೋತ್ಸವದ ಸಂದೇಶವಾಗಿ, ಸ್ವಾತಂತ್ರ್ಯ ಎಂದರೆ ಸಮಾಜದ ಎಲ್ಲಾ ವರ್ಗದ ಜನರಿಗೆ ಹಸಿವಿನಿಂದ ಸ್ವಾತಂತ್ರ್ಯ, ಬಡತನದಿಂದ ಸ್ವಾತಂತ್ರ, ಕತ್ತಲೆಯಿಂದ ಸ್ವಾತಂತ್ರ್ಯ, ಸಂಕೋಲೆಯಿಂದ ಸ್ವಾತಂತ್ರ್ಯ, ನಿರುದ್ಯೋಗದಿಂದ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಿಜವಾದ ಸ್ವಾತಂತ್ರ್ಯವೆಂದು ಸಂದೇಶ ನೀಡಿದ್ದಾರೆ” ಎಂದರು.

“ಐದು ಗ್ಯಾರಂಟಿ ಯೋಜನೆಗಳನ್ನು ದೇಶದ ಅನೇಕ ರಾಜ್ಯಗಳು ಗಮನಿಸುತ್ತಿವೆ. ಪ್ರಪಂಚದ ಅನೇಕ ರಾಷ್ಟ್ರಗಳು ಅಧ್ಯಯನ ಮಾಡುತ್ತಿವೆ. ಐದು ಗ್ಯಾರಂಟಿಗಳ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದೆ” ಎಂದು ಅಭಿಪ್ರಾಯ ಪಟ್ಟರು.