Join The Telegram | Join The WhatsApp |
ಮುಂಬೈ-
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022 ರ ಡಿಸೆಂಬರ್ 1 ರಂದು ಚಿಲ್ಲರೆ ಉದ್ದೇಶಕ್ಕಾಗಿ ಡಿಜಿಟಲ್ ರೂಪಾಯಿಗೆ (e₹-R) ಮೊದಲ ಪೈಲಟ್ ಅನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದೆ.
ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿ, ಹಂತ ಹಂತವಾಗಿ ಇತರೆ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಈ ಯೋಜನೆ ಜಾರಿಗೆ ನಾಲ್ಕು ಬ್ಯಾಂಕ್‌ಗಳನ್ನು ಆರ್‌ಬಿಐ ಗುರುತಿಸಿದೆ.
ಖಾಸಗಿ ಕ್ರಿಪ್ಟೊ ಕರೆನ್ಸಿಯನ್ನು ಭಾರತದಲ್ಲಿ ನಿರ್ಬಂಧಿಸಿದ ಬಳಿಕ ಆರ್‌ಬಿಐ ತನ್ನದೇ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರುವುದಾಗಿ ಘೋಷಿಸಿತ್ತು. ಅದರಂತೆ ಈಗಾಗಲೇ ಸಗಟು ಮಟ್ಟದಲ್ಲಿ ಡಿಜಿಟಲ್ ಕರೆನ್ಸಿ ಪ್ರಾಯೋಗಿಕ ಬಳಕೆಯನ್ನು ಆರಂಭಿಸಲಾಗಿದ್ದು, ಈಗ ಚಿಲ್ಲರೆ ವ್ಯವಹಾರಗಳಿಗೆ ಇದರ ಚಲಾವಣೆ ವಿಸ್ತರಿಸಲಾಗುತ್ತಿದೆ. ಡಿಜಿಟಲ್ ಕರೆನ್ಸಿಯು ಕಾನೂನುಬದ್ಧ, ವಿಶ್ವಾಸಾರ್ಹ ಮತ್ತು ಸುರಕ್ಷತ ವಹಿವಾಟು ಸಾಧ್ಯವಾಗಿಸುತ್ತದೆ. ಜತೆಗೆ ಭೌತಿಕ ನಗದಿನ ನಿರ್ವಹಣೆ ವೆಚ್ಚವನ್ನು ತಗ್ಗಿಸಲಿದೆ. ಡಿಜಿಟಲ್ ರೂಪಾಯಿಯು ನಗದು ಕರೆನ್ಸಿಗೆ ಪರ್ಯಾಯವಲ್ಲದಿದ್ದರೂ, ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಪೂರಕ ಕರೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.
ಡಿಜಿಟಲ್ ರೂಪಾಯಿ’ ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಪ್ರಸ್ತುತ ಪೇಪರ್ ಕರೆನ್ಸಿ ಮತ್ತು ನಾಣ್ಯಗಳಲ್ಲಿರುವ ಮೌಲ್ಯದಲ್ಲೇ ಡಿಜಿಟಲ್ ಕರೆನ್ಸಿಯನ್ನು ಆರ್‌ಬಿಐ ವಿತರಿಸಲಿದೆ. ಆರ್‌ಬಿಐ ಜತೆ ಒಪ್ಪಂದ ಮಾಡಿಕೊಂಡ ನಾಲ್ಕು ಬ್ಯಾಂಕ್‌ಗಳ ಮೂಲಕ ಡಿಜಿಟಲ್ ಕರೆನ್ಸಿಯು ಲಭ್ಯವಾಗಲಿದೆ.
ಯಾವ ಬ್ಯಾಂಕ್‌ಗಳಲ್ಲಿ ವಹಿವಾಟು ?
ಮೊದಲ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಮತ್ತು ಐಡಿಎಫ್‌ಸಿ ಬ್ಯಾಂಕ್‌ಗಳು ಡಿಜಿಟಲ್ ರುಪೀ ಒದಗಿಸಲಿವೆ. ಶೀಘ್ರದಲ್ಲೇ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್‌ಗಳು ಪ್ರಾಯೋಗಿಕ ಯೋಜನೆಗೆ ಸೇರ್ಪಡೆಗೊಳ್ಳಲಿವೆ.
ಬೆಂಗಳೂರು, ಮುಂಬಯಿ, ಹೊಸದಿಲ್ಲಿ, ಭುವನೇಶ್ವರದಲ್ಲಿ ಆರಂಭಿಕವಾಗಿ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ. ಇದನ್ನು ನಂತರ ಅಹಮದಾಬಾದ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಟನ ಮತ್ತು ಶೀಮ್ಲಾಕ್ಕೂ ವಿಸ್ತರಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಬಳಕೆ ಹೇಗೆ ?
ಆರಂಭಿಕವಾಗಿ ಯೋಜನೆಯಲ್ಲಿ ಪಾಲ್ಗೊಂಡಿರುವ ನಾಲ್ಕು ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ‘ಇ-ರುಪೀ’ ರೂಪಾಯಿ ಬಳಸಿ ವಹಿವಾಟು ನಡೆಸಬಹುದು. ವ್ಯಕ್ತಿಯಿಂದ ವ್ಯಕ್ತಿ (ಪಿ2ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿ (ಪಿ2ಎಂ) ಎರಡು ಮಾದರಿಗಳಲ್ಲಿ ವಹಿವಾಟಿಗೆ ಅವಕಾಶವಿದೆ. ವ್ಯಾಪಾರಿಗಳ ಜತೆಗಿನ ವಹಿವಾಟಿನ ಸಂದರ್ಭದಲ್ಲಿ ಮಳಿಗೆಗಳಲ್ಲಿ ಪ್ರದರ್ಶಿಸಲಾಗುವ ‘ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ತಾವು ಬ್ಯಾಂಕ್‌ಗಳು ನೀಡಿದ ವ್ಯಾಲೆಟ್‌ನಲ್ಲಿರುವ ‘ಡಿಜಿಟಲ್ ರೂಪಾಯಿ’ಯನ್ನು ವ್ಯಾಪಾರಿಗಳಿಗೆ ವರ್ಗಾಯಿಸಬಹುದು.
ಪ್ರಪಂಚದಾದ್ಯಂತ CBDC ಗಳು-
ಕನಿಷ್ಠ 100 ದೇಶಗಳು ಕೇಂದ್ರೀಕೃತ ಡಿಜಿಟಲ್ ಕರೆನ್ಸಿಗಳನ್ನು ಕೆಲವು ಹಂತಗಳಲ್ಲಿ ಅಥವಾ ಇನ್ನೊಂದರಲ್ಲಿ ಅನ್ವೇಷಿಸುತ್ತಿವೆ. ಕೆಲವರು ಸಂಶೋಧನೆ ನಡೆಸುತ್ತಿದ್ದರೆ, ಇತರರು ಪ್ರಾಯೋಗಿಕ ಆಧಾರದ ಮೇಲೆ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಿದ್ದಾರೆ ಅಥವಾ ಸಾರ್ವಜನಿಕರಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಬಡ್ಡಿ ಸಿಗುವುದಿಲ್ಲ-
ವ್ಯಾಲೆಟ್‌ನಲ್ಲಿ ಡಿಜಿಟಲ್ ಕರೆನ್ಸಿ ಬ್ಯಾಲೆನ್ಸ್ ಇದ್ದರೂ ಅದಕ್ಕೆ ಯಾವುದೇ ಬಡ್ಡಿ ಬರುವುದಿಲ್ಲ. ಆದರೆ, ವ್ಯಾಲೆಟ್‌ನಲ್ಲಿರುವ ಬ್ಯಾಂಕ್ ಠೇವಣಿ ಮುಂತಾದ ಮಾದರಿಗಳಿಗೆ ವರ್ಗಾಯಿಸಬಹುದು ಎಂದು ಆರ್‌ಬಿಐ ತಿಳಿಸಿದೆ.
Join The Telegram | Join The WhatsApp |