ನವದೆಹಲಿ : ದಶಕದಲ್ಲೇ ಮೊದಲ ಬಾರಿಗೆ ಲೋಕಸಭೆಯ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಲೋಕಸಭಾ ಚುನಾವಣೆ ನಂತರ ಸ್ಪೀಕರ್ ಹುದ್ದೆಗೆ ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತುಕತೆ ವಿಫಲವಾಗಿದ್ದರಿಂದ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ ಸ್ಪೀಕರ್‌ ಆಗಿದ್ದ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನೇತೃ ತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಕೆ.ಸುರೇಶ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಮತದಾನ ನಡೆಯಲಿದೆ.
ಲೋಕಸಭೆಯ ಒಟ್ಟು 542 ಸದಸ್ಯಬಲದ ಪೈಕಿ ಎನ್‌ಡಿಎ 293 ಸದಸ್ಯರನ್ನು ಹೊಂದಿದೆ. ಅಲ್ಲದೆ 12 ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದು, ಒಟ್ಟು 305 ಸದಸ್ಯರನ್ನು ಹೊಂದಿದೆ. ಸ್ಪೀಕರ್ ಹುದ್ದೆಗೆ ಗೆಲ್ಲಲು 272 ಮತಗಳನ್ನು ಪಡೆಯಬೇಕು. ಈಗಿನ ಬಲಾಬಲದಲ್ಲಿ ಎನ್‌ಡಿಎ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ ಅವರಿಗೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಬೆಂಬಲ ಸೂಚಿಸಿದ್ದು, ಸದ್ಯ 233 ಸದಸ್ಯರ ಬೆಂಬಲವನ್ನು ಹೊಂದಿದೆ. ಈ ಮಧ್ಯೆ ಮತ್ತೊಂದು ಬೆಳವಣಿಗೆಯಾಗಿದೆ ಎಂದು ಹೇಳಲಾಗುತ್ತಿದ್ದು, ತಮ್ಮ ಜೊತೆ ಸಮಾಲೋಚಿಸದೆ ಕಾಂಗ್ರೆಸ್‌ ಏಕಪಕ್ಷೀಯವಾಗಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪಕ್ಷದಿಂದ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಒಂದುವೇಳೆ ಟಿಎಂಸಿ ಸ್ಪೀಕರ್‌ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆದರೆ ಎನ್‌ಡಿಎ ಅಭ್ಯರ್ಥಿಯ ಗೆಲುವಿನ ದಾರಿ ಇನ್ನಷ್ಟು ಸುಗಮವಾಗಲಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಮೂಡಲಿದೆ.
ಇದಕ್ಕೂ ಮುನ್ನ ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ ರಿಜುಜು ಅವರು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ ಯಾದವ್, ಟಿ.ಆರ್.ಬಾಲು ಸೇರಿದಂತೆ ಹಲವರ ಜೊತೆ ನಡೆಸಿದ ಮಾತುಕತೆ ವಿಫಲವಾಯಿತು. ರಾಜನಾಥ ಸಿಂಗ್ ಜೊತೆಗೆ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರು ಎನ್‌ಡಿಎ ಅಭ್ಯರ್ಥಿಯನ್ನು ಅನುಮೋದಿಸುವಂತೆ ವಿರೋಧ ಪಕ್ಷದ ನಾಯಕರನ್ನು ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.

ಸ್ಪೀಕರ್ ಅಭ್ಯರ್ಥಿಗೆ ನಾವು ಬೆಂಬಲ ನೀಡುತ್ತೇವೆ. ಅದೇ ರೀತಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ನಮಗೆ ಬಿಟ್ಟುಕೊಡಿ ಎಂದು ಇಂಡಿಯಾ ಮೈತ್ರಿಕೂಟವು ಬೇಡಿಕೆ ಇಟ್ಟಿತು. ಸರ್ಕಾರದ ಪ್ರತಿಯೊಂದು ನೀತಿ ನಿಯಮಗಳು, ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹುದ್ದೆಯನ್ನು ಬಿಟ್ಟುಕೊಡಲು ಆಡಳಿತ ಮೈತ್ರಿಕೂಟ ಒಪ್ಪಲಿಲ್ಲ.
ಹೀಗಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜುಜು ನಡೆಸಿದ ವಿಫಲವಾಯಿತು. ಯಾವಾಗ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡಲು ಎನ್‌ಡಿಎ ನಿರಾಕರಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಕೆ.ಸುರೇಶ ಅವರನ್ನು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಶಾ, ಸಿಂಗ್ ಮತ್ತು ನಡ್ಡಾ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿ (ಯು), ಜೆಡಿ (ಎಸ್) ಮತ್ತು ಎಲ್‌ಜೆಪಿ (ಆರ್) ಸೇರಿದಂತೆ ಬಿರ್ಲಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ 10 ಸೆಟ್‌ಗಳಿಗಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಂಟು ಬಾರಿ ಸಂಸದರಾಗಿರುವ ಕೆ. ಸುರೇಶ ಅವರನ್ನು ಬೆಂಬಲಿಸಿ ಮೂರು ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ.