ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆ ಕೂಲ್ಸುಂ (14) ಮೃತ ದುರ್ದೈವಿ. ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಉಮ್ಮೆ ಕೂಲ್ಸುಂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ರಸ್ತೆ ದಾಟುವ ವೇಳೆ ವಿದ್ಯಾರ್ಥಿನಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಉಮ್ಮೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಟ್ಟಿದ್ದಾಳೆ.

ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿಸ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆ :
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪರಶುರಾಮ್ (17) ನೇಣಿಗೆ ಶರಣಾದ ವಿದ್ಯಾರ್ಥಿ.

ಪರಶುರಾಮ್‌ ಆನಂದಪುರದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಓದುತ್ತಿದ್ದ. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಪರಶುರಾಮ್‌ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾದ್ದಾನೆ.

ಪರೀಕ್ಷೆ ಭಯಕ್ಕೆ ಮೃತಪಟ್ಟನಾ ಅಥವಾ ಬೇರೆಯಾವುದಾದರೂ ವಿಚಾರಕ್ಕೆ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದನಾ ಎಂಬುದು ತಿಳಿದು ಬಂದಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಆನಂದಪುರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.