ಮೂಡಲಗಿ:ಮೂಡಲಗಿ ಪುರಸಭೆಯ ನೂತನ ಅಧ್ಯಕ್ಷೆಯನ್ನಾಗಿ ಮುಸ್ಲಿಂ ಮಹಿಳೆಗೆ ಅಧಿಕಾರ ನೀಡಲು ಕಾರಣಿಕರ್ತರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ ಸಲ್ಲಿಸಿದರು.
ಮೂಡಲಗಿ ಪುರಸಭೆಗೆ ಬುಧವಾರದಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮಹಿಳೆಗೆ ಅಧ್ಯಕ್ಷರಾಗುವ ಅದೃಷ್ಟವನ್ನು ನೀಡಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಖುರ್ಷಾದಾ ನದಾಫ ಅವರಿಗೆ ಅಧ್ಯಕ್ಷೆ ಗಾದೆಗೆ ಏರಿಸಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಗೌರವ ಅರ್ಪಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬಿಜೆಪಿಯು ಎಲ್ಲ ವರ್ಗಗಳ ಪರವಾಗಿದೆ. ನಮಗೆ ಆಗದ ವಿರೋಧಿಗಳು ಬಿಜೆಪಿ ಬಗ್ಗೆ ಅಪಪ್ರಚಾರ ಹಬ್ಬಿಸುತ್ತಿದ್ದಾರೆ. ಒಂದು ವೇಳೆ ಬಿಜೆಪಿಯು ಮುಸ್ಲಿಂರ ವಿರೋಧಿಯಾಗಿದ್ದರೆ ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದ ಅಧ್ಯಕ್ಷ ಹುದ್ದೆಗೆ ಮುಸ್ಲಿಂ ಮಹಿಳೆಗೆ ಏಕೆ ಅವಕಾಶ ನೀಡಬೇಕಾಗಿತ್ತು.? ಎಂದು ಪ್ರಶ್ನಿಸಿದ ಅವರು, ಮೂಡಲಗಿ ಇತಿಹಾಸದಲ್ಲಿಯೇ ಸುಮಾರು ಮೂರುವರೆ ದಶಕದ ಬಳಿಕ ಮುಸ್ಲಿಂ ಮಹಿಳೆಗೆ ಅಧ್ಯಕ್ಷರಾಗುವ ಸುವರ್ಣಾವಕಾಶವನ್ನು ನೀಡಲಾಗಿದೆ. ಇದನ್ನರಿತು ನೂತನ ಅಧ್ಯಕ್ಷರು ಎಲ್ಲ ಸಮುದಾಯದ ಪ್ರಮುಖರನ್ನು ಗಣನೆಗೆ ತೆಗೆದುಕೊಂಡು ಜನರಿಗೆ ವಿಶ್ವಾಸ ಬರುವಂತೆ ಕೆಲಸ ಮಾಡುವಂತೆ ಸಲಹೆ ಮಾಡಿದರು.
*ಸರ್ಕಾರದ ದುಡ್ಡು ಗ್ಯಾರಂಟಿಗೆ-* ಮೂಡಲಗಿ ಪುರಸಭೆಯ ವ್ಯಾಪ್ತಿಯ ಅಭಿವೃದ್ಧಿಗೆ ಈಗಿರುವ ಸರ್ಕಾರ ಅನುದಾನ ಕೊಡುತ್ತಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಹೇಗಾದರೂ ಮಾಡಿ ಅಭಿವೃದ್ಧಿಗೆ ಹಣ ಕೇಳುತ್ತೇನೆ. ಕನಿಷ್ಟ ಪಕ್ಷ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾದರೂ ವ್ಯವಸ್ಥೆ ಮಾಡುತ್ತೇನೆ. ಹೊಸ ಹೊಸ ಕೆಲಸಗಳನ್ನು ಮಾಡಲಿಕ್ಕೆ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪುರಸಭೆಯ ನೂತನ ಅಧ್ಯಕ್ಷೆ ಖುರ್ಷಾದಾ ಅನ್ವರ ನದಾಫ ಹಾಗೂ ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಪುರಸಭೆಯ ಸದಸ್ಯರುಗಳು ಸತ್ಕರಿಸಿ ಗೌರವಿಸಿದರು.
ಮುಖಂಡರಾದ ರವಿ ಸೋನವಾಲ್ಕರ, ಅಜೀಜ ಡಾಂಗೆ, ಬಸಗೌಡ ಪಾಟೀಲ, ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಈಶ್ವರ ಕಂಕಣವಾಡಿ, ಸುಭಾಸ ಸಣ್ಣಕ್ಕಿ, ಹುಸೇನ ಥರಥರಿ, ಇರ್ಫಾನ ನದಾಫ, ಈರಪ್ಪ ಬನ್ನೂರ, ಡಾ. ಎಸ್.ಎಸ್. ಪಾಟೀಲ, ಮಲ್ಲಿಕಾರ್ಜುನ ಬಳಿಗಾರ, ಚನಮಲ್ಲಯ್ಯ ನಿರ್ವಾಣಿ, ಚನ್ನಪ್ಪ ಅಥಣಿ, ಮರೆಪ್ಪ ಮರೆಪ್ಪಗೋಳ, ರಾಮು ಜಂಡೇಕುರುಬರ, ಸುಲ್ತಾನ ಕಳ್ಳಿಮನಿ, ರಮೇಶ ಸಣ್ಣಕ್ಕಿ, ಇದ್ರೀಶ ಕಲಾರಕೊಪ್ಪ, ಚಿನ್ನಪ್ಪ ಜಂಡೇಕುರುಬರ, ಶಿವಬೋಧ ಗೋಕಾಕ, ಶಬ್ಬೀರ ಡಾಂಗೆ, ಸಿದ್ದು ಗಡೇಕಾರ,ದಶರಥ ಗಾಡಿವಡ್ಡರ, ಆನಂದ ಟಪಾಲ, ಮೀರಾ ನದಾಫ, ಪುರಸಭೆಯ ಸದಸ್ಯರು, ವಿವಿಧ ಸಮಾಜಗಳ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.