ಬೆಳಗಾವಿ: ರಾಯಬಾಗ ತಾಲೂಕು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಯುವತಿಯರಿಬ್ಬರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ ದೇವನೂರು, ಆದಿಲ್ ಶಾ ಬಂಧಿತರಾಗಿದ್ದಾರೆ. ಇನ್ನೊಬ್ಬ ಕೌತುಬ್ ಬಾಬುಸಾಬ್ ಬಡಿಗೇರ್ ತಲೆಮರೆಸಿಕೊಂಡಿದ್ದು ಮೂವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸ್ಪಿ ಭೀಮಶಂಕರ್ ಗುಳೇದ್ ಅವರು ಮಾಹಿತಿ ನೀಡಿದ್ದಾರೆ.
ಯುವತಿಯರಿಬ್ಬರೂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಭಿಷೇಕ ದೇವನೂರ ಎಂಬಾತ instagram ನಲ್ಲಿ ಮೆಸೇಜ್ ಮಾಡಿ ಯುವತಿ ಒಬ್ಬಳ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಪ್ರತಿಕ್ರಿಯೆ ನೀಡಿದ ಯುವತಿ ಆರೋಪಿಯೊಂದಿಗೆ ಸಲುಗೆ ಬೆಳಸಿಕೊಂಡಿದ್ದಳು. ಜನವರಿ ಮೂರರಂದು ಅಥಣಿ ತಾಲೂಕು ಕೊಕಟನೂರ ಜಾತ್ರೆಯಲ್ಲಿ ಇಬ್ಬರು ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದರು. ಎರಡನೇ ಭೇಟಿಯಲ್ಲಿ ಯುವತಿಯನ್ನು ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರೋಣ ಎಂದು ಅಭಿಷೇಕ ಪುಸಲಾಯಿಸಿದ್ದು, ಅದರಂತೆ ಯುವತಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಬಂದಿದ್ದಾಳೆ. ಅಭಿಷೇಕ ತನ್ನ ಇಬ್ಬರು ಸ್ನೇಹಿತರಾದ ಆದಿಲ್ ಶಾ ಮತ್ತು ಕೌತುಬ್ ನನ್ನು ಕರೆದುಕೊಂಡು ಬಂದಿದ್ದಾನೆ. ಕಾರಿನಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದರು. ಈ ಮೂರು ಯುವಕರು ಯುವತಿಯರನ್ನು ಸವಸುದ್ದಿ ಹೊರ ವಲಯದ ಗುಡ್ಡದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಗುಡ್ಡದಲ್ಲಿ ಅಭಿಷೇಕ ಮತ್ತು ಆದಿಲ್ ಸೇರಿ ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಕಾರಿನಲ್ಲಿ ಕೌತುಬ್ ಇನ್ನೊಬ್ಬ ಯುವತಿಯನ್ನು ಅತ್ಯಾಚಾರ ಎಸಗಿದ್ದ.
ಅತ್ಯಾಚಾರ ಎಸಗಿದ ಸಂಪೂರ್ಣ ಕ್ಷಣಗಳನ್ನು ಯುವಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವಿಡಿಯೋ ಇಟ್ಟುಕೊಂಡು ಪದೇ ಪದೇ ತಮ್ಮೊಂದಿಗೆ ಬರುವಂತೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಮುಂದಿನ ವಾರ ಎಲ್ಲರೂ ಗೋವಾಕ್ಕೆ ಹೋಗೋಣ ಬಾರದೇ ಇದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬ್ಲಾಕ್ ಮೇಲ್ ಮಾಡಿದ್ದರು. ಇದರಿಂದ ಹೆದರಿದ ಯುವತಿ ಜನವರಿ 13ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಅಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ ಪಿ ತಿಳಿಸಿದರು.
ಅತ್ಯಾಚಾರ ಮತ್ತು ವಿಡಿಯೋ ಮಾಡಿಕೊಂಡ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಯುವತಿಯನ್ನು ಬೆದರಿಸಿದ್ದರು. ಹೀಗಾಗಿ ಯುವತಿಯರು ತಡವಾಗಿ ದೂರು ದಾಖಲು ಮಾಡಿದ್ದಾರೆ. ಇನ್ನೊಬ್ಬನಿಗೆ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಅವರು ತಿಳಿಸಿದರು.