ಬೆಳಗಾವಿ : ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ವಶಕ್ಕೆ ಪಡೆದಿರುವ ಯಮಕನಮರಡಿ ಪೊಲೀಸರು ಲಾರಿಯಲ್ಲಿದ್ದ ಸುಮಾರು 28 ಲಕ್ಷ ಮೌಲ್ಯದ 16,848 ಲೀಟರ್ ವಿವಿಧ ಬಗೆಯ ಮದ್ಯ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಶನಿವಾರ ಗೋವಾ ರಾಜ್ಯದಿಂದ ಆಂಧ್ರ ಪ್ರದೇಶಕ್ಕೆ ಬೃಹತ್ ಲಾರಿಯೊಂದರಲ್ಲಿ ಅಕ್ರಮವಾಗಿ ವಿವಿಧ ಬಗೆಯ ದುಬಾರಿ ಬೆಲೆಯ ಮದ್ಯವನ್ನು ಖಚಿತ ಮಾಹಿತಿ ಮೇರೆಗೆ ಯಮಕನಮರಡಿ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಲಾರಿಯಲ್ಲಿ ಸುಮಾರು 28 ಲಕ್ಷ ಮೌಲ್ಯದ ಮದ್ಯ ಇದ್ದು ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಲಾರಿ ಚಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಅವರು ಹಾರ್ಡ್‌ವೇರ್ ಸಾಗಣೆಯ ಸುಳ್ಳು ದಾಖಲೆಗಳನ್ನು ಹೇಳಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಎಸ್ ಪಿ ಗುಳೇದ ತಿಳಿಸಿದ್ದಾರೆ.