ಬೆಂಗಳೂರು: ರಾಜ್ಯದಲ್ಲಿ ಹೆಚ್ ಎಂ ಪಿ ವಿ ವೈರಸ್ ನ ಎರಡು ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ , ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಚೈನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವೈರಸ್ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆದ್ದರಿಂದ ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸುತ್ತಿದ್ದು, ವೈರಸ್ ತಡೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ಸೋಂಕು ತಡೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನ: ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ನಕ್ಸಲರ ಶರಣಾಗತಿಗೆ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಲಿ ಎಂದು ಕರೆ ನೀಡಿದ್ದೇನೆ ಹಾಗೂ ನಕ್ಸಲರ ಮನ:ಪರಿವರ್ತನೆಯಾಗಿ ಶರಣಾಗುವ ಸಾಧ್ಯತೆಯಿದೆ. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಕೇಂದ್ರ ಸಚಿವ ಹೆಚ್ ಡಿ.ಕುಮಾರಸ್ವಾಮಿಯವರು ರಾಜ್ಯಸರ್ಕಾರದ ಕಮೀಷನ್ ಪ್ರಮಾಣ ಶೇ. 60 ಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಕಮೀಷನ್ ಆರೋಪವನ್ನು ಗುತ್ತಿಗೆದಾರ ಸಂಘದ ಅಧ್ಯಕ್ಷರು ಕೆಂಪಯ್ಯನವರು ಮಾಡಿದ್ದರು. ಬಿಜೆಪಿಯವರು ಕಮೀಷನ್ ತೆಗೆದುಕೊಂಡಿರುವುದಾಗಿ ಕೆಂಪಯ್ಯನವರು ಆರೋಪಿಸಿದ್ದಾಗಿ ತಿಳಿಸಿದರು.

ಸಾರಿಗೆ ನೌಕರರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಅತ್ಯಂತ ಉತ್ತಮ ಕಾರ್ಯಕ್ರಮ: ಸಿ.ಎಂ.ಸಿದ್ದರಾಮಯ್ಯ:
ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು: ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಸ್ಪಷ್ಟ ಸೂಚನೆ :

ಬೆಂಗಳೂರು: ನಮ್ಮ ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು. ಚಿಕಿತ್ಸೆ ನೀಡುವಲ್ಲಿ ಉದಾಸೀನ ಮಾಡಕೂಡದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಾರಿಗೆ ನೌಕರರು ತಮ್ಮ ದುಡಿಮೆಯ ಮೂಲಕ ಸಂಸ್ಥೆಯ ಮತ್ತು ನಿಗಮದ ಆದಾಯ ಹೆಚ್ಚಿಸುತ್ತಿದ್ದಾರೆ. ಇವರ ಆರೋಗ್ಯ ಸರ್ಕಾರದ ಮತ್ತು ಸಂಸ್ಥೆ ಹಾಗೂ ನಿಗಮದ ಜವಾಬ್ದಾರಿ ಆಗಿದೆ. ಈ ಕಾರಣಕ್ಕೇ ಖಾಸಗಿ ಆಸ್ಪತ್ರೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.

275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ ಆಗಿದೆ. ಈ ಪ್ರಮಾಣ ಇನ್ನೂ ಹೆಚ್ಚಲಿದೆ. ಸಿಬ್ಬಂದಿ ಕರ್ತವ್ಯನಿರತ ಊರಿನಲ್ಲೇ ಚಿಕಿತ್ಸೆ ಪಡೆಯಬಹುದು. ನೌಕರರ ಕುಟುಂಬದವರು ಅವರು ನೆಲೆಸಿರುವ ಊರಿನಲ್ಲೇ ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾದ ಅತ್ಯಂತ ಸುಲಲಿತ ಯೋಜನೆ ಇದಾಗಿದೆ. ನಮ್ಮ ನೌಕರರು ಮತ್ತು ಕುಟುಂಬದವರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಸಮಾಜದಲ್ಲಿ ಲಿಂಗ ತಾರತಮ್ಯ ಇರುವುದರಿಂದ ಮಹಿಳೆಯರ ಆರ್ಥಿಕ‌ ಸಾಮರ್ಥ್ಯ ಹೆಚ್ಚಿಸಲು ಶಕ್ತಿ ಮತ್ತು ಇತರೆ ಯೋಜನೆಗಳ ಮೂಲಕ ಮಹಿಳೆಯರಿಗೆ ಅನುಕೂಲ ಮತ್ತು ಶಕ್ತಿ ಹೆಚ್ಚಿಸಿದ್ದೇವೆ ಎಂದರು.

ಶಕ್ತಿ ಯೋಜನೆ ಪರಿಣಾಮ ಧಾರ್ಮಿಕ‌ ಸ್ಥಳಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳೂ ನನಗೂ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿದರು.

ಗೃಹಲಕ್ಷ್ಮಿ’ ಮಾದರಿಯಲ್ಲಿ “ಪ್ಯಾರಿ ದೀದಿ ಯೋಜನೆ”; ದೆಹಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಗ್ಯಾರಂಟಿ ಪ್ರಕಟಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ʼಗೃಹಲಕ್ಷ್ಮಿʼ ಮಾದರಿಯಲ್ಲಿ “ಪ್ಯಾರಿ ದೀದಿ ಯೋಜನೆ” ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ನೀಡುವ ಗ್ಯಾರಂಟಿ ಭರವಸೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಪ್ರಕಟಿಸಿದರು.

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ದೆಹಲಿ ಕಾಂಗ್ರೆಸ್ ನ ಚುನಾವಣೆ ಪ್ರಣಾಳಿಕೆಯ ಭಾಗವಾಗಿ ಮೊದಲ ಗ್ಯಾರಂಟಿ ಭರವಸೆಯನ್ನು ಘೋಷಿಸಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ “ಪ್ಯಾರಿ ದೀದಿ ಯೋಜನೆ” ಜಾರಿ ಮಾಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ನೀಡಲಾಗುವುದು. ಉಳಿದ ಗ್ಯಾರಂಟಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಮ್ಮ ನಾಯಕರು ತಿಳಿಸಲಿದ್ದಾರೆ” ಎಂದು ಹೇಳಿದರು.

“ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನಾನಿಂದು ಇಲ್ಲಿ ಪ್ರಮುಖ ಯೋಜನೆಯ ಭರವಸೆ ನೀಡುತ್ತಿದ್ದೇನೆ. ನೂರು ವರ್ಷಗಳ ಹಿಂದೆ ಅಂದರೆ 1924ರ ಡಿ.26 ರಂದು ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಅದರ ಶತಮಾನೋತ್ಸವವನ್ನು ನಾವು ಇತ್ತೀಚೆಗಷ್ಟೇ ಆಚರಿಸಿದ್ದೇವೆ. ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಾಗದಲ್ಲಿ ಇರುವ ಬಾವಿಯಲ್ಲಿನ ನೀರು ತೆಗೆದುಕೊಂಡು ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ನಾಯಕರು ಅಲ್ಲಿನ ಜಾಗವನ್ನು ಸ್ವಚ್ಛ ಮಾಡಿ ಕರ್ನಾಟಕ ರಾಜ್ಯವನ್ನು ಭ್ರಷ್ಟ ಸರ್ಕಾರದಿಂದ ಮುಕ್ತಗೊಳಿಸುವ ಪಣತೊಟ್ಟೆವು. ಇದೇ ಸಂದರ್ಭದಲ್ಲಿ ನಮ್ಮ ಪಕ್ಷದ ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿಯನ್ನು ಘೋಷಣೆ ಮಾಡಲಾಯಿತು. ನಂತರ ಗೃಹಲಕ್ಷ್ಮಿ ಯೋಜನೆಯನ್ನು ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಇದು ಕೇವಲ ಭರವಸೆಯಾಗಬಾರದು. ಈ ಯೋಜನೆ ಜಾರಿ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಬೇಕು ಎಂದು ಹೇಳಿದರು. ಹೀಗಾಗಿ ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದೆವು. ನಂತರ ಸರ್ಕಾರ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಲಾಯಿತು.

ಮೊದಲ ಮೂರು ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಉಚಿತ ಸರ್ಕಾರಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಡವರಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟೆ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ” ಎಂದರು ಹೇಳಿದರು.

ಈ ಯೋಜನೆಗಳಿಗಾಗಿ 56 ಸಾವಿರ ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. 1.22 ಕೋಟಿ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ಹಣ ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆರ್ಥಿಕ ಬದಲಾವಣೆ ತರಲಾಗಿದೆ. ಪ್ರತಿ ತಿಂಗಳು 4-5 ಸಾವಿರ ಉಳಿತಾಯವಾಗುತ್ತಿದೆ. ಇದರಿಂದ ರಾಜ್ಯದ ಆರ್ಥಇಕತೆ ಪ್ರಗತಿ ಸಾಧಿಸುತ್ತಿದೆ. ಸಮಾಜದ ಪ್ರತಿ ವರ್ಗದ ಹಿತವನ್ನು ಕಾಯಬೇಕು ಎಂಬುದು ಮಹಾತ್ಮಾ ಗಾಂಧಿ ಅವರ ಸಂದೇಶವಾಗಿತ್ತು. ಹೀಗಾಗಿ ನಮ್ಮ ಸರ್ಕಾರ ಈ ಯೋಜನೆ ಜಾರಿ ಮಾಡಿದೆ” ಎಂದು ತಿಳಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳ ಕುಟುಂಬಗಳಲ್ಲಿ ಆಗಿರುವ ಬದಲಾವಣೆ, ನೆರವಿನ ಕುರಿತ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು.

“ನಾವು ಇಲ್ಲಿ ತೋರಿಸಿರುವ ವಿಡಿಯೋಗಳು ನಾವು ಮಾಡಿರುವುದಲ್ಲ. ಮಾಧ್ಯಮಗಳು ವರದಿ ಮಾಡಿರುವ ವಿಡಿಯೋಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಯಾವುದೇ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ರವಾನಿಸಲಾಗುತ್ತಿದೆ” ಎಂದರು.

“ನಾವು ಈ ಯೋಜನೆ ಘೋಷಣೆ ಮಾಡಿದಾಗ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ದಿವಾಳಿಯಾಗಲಿದೆ ಎಂದು ಮಧ್ಯಪ್ರದೇಶದಲ್ಲಿ ಹೇಳಿದರು. ನಂತರ ಮಹಾರಾಷ್ಟ್ರದಲ್ಲೂ ನಮ್ಮ ಯೋಜನೆ ವಿರುದ್ಧ ಅಪಪ್ರಚಾರ ಮಾಡಿದರು. ಅಂತಿಮವಾಗಿ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಅವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕಲ್ಯಾಣಕ್ಕಾಗಿ, ರಕ್ಷಣೆಗಾಗಿ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ” ಎಂದು ತಿಳಿಸಿದರು.

“ಮೋದಿ ಅವರ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ಆದರೆ ಬೆಲೆಗಳನ್ನು ಡಬಲ್ ಮಾಡಿತು. ಜನಧನ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದಂತೆ ಭರವಸೆ ಈಡೇರಿಸಲಿಲ್ಲ. ಬಿಜೆಪಿ ಸರ್ಕಾರಗಳು ಕೊಟ್ಟ ಮಾತನ್ನು ಎಂದಿಗೂ ಉಳಿಸಿಕೊಂಡಿಲ್ಲ. ಆದರೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿವೆ.

ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು, ಗ್ರಾಮೀಣ ಉದ್ಯೋಗ ಖಾತರಿ, ಮಾಹಿತಿ ಹಕ್ಕು ಸೇರಿದಂತೆ ಸಂವಿಧಾನಿಕ ತಿದ್ದುಪಡಿ ಮೂಲಕ ಗ್ಯಾರಂಟಿ ಯೋಜನೆ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಸುದೀರ್ಘ ಅವಧಿಗಳ ಕಾಲ ದೇಶವನ್ನು ಆಳಿದೆ. ಮತ್ತೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಒಳ್ಳೆಯ ದಿನಗಳು ಮತ್ತೆ ಬರಲಿವೆ. ದೆಹಲಿ ಹಾಗೂ ಇಲ್ಲಿನ ಜನರ ಬದುಕಿನಲ್ಲಿ ಬದಲಾವಣೆ ತರಲು ಜನರು ನಮಗೆ ಮತ್ತೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ತಿಳಿಸಿದರು.

“ಎಲ್ಲರಿಗೂ ಹೊಸವರ್ಷದ ಶುಭಾಷಯಗಳು. ಈ ಹೊಸ ವರ್ಷ ದೆಹಲಿಯಲ್ಲಿ ಬದಲಾವಣೆಯನ್ನು ತರಲಿ. ನೀವೆಲ್ಲರೂ ಕಾಂಗ್ರೆಸ್ ಸರ್ಕಾರ ಬರಲು ಸಹಾಯ ಮಾಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಮುಂದೆಯೂ ನಾವು ಕೊಟ್ಟ ಮಾತನ್ನು ಉಳಿಸಿಕೊಂಡು ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ” ಎಂದು ತಿಳಿಸಿದರು.

ಪ್ರಶ್ನೋತ್ತರ:

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಹದಗೆಡುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಗತ್ಯವಾದ ಅನುದಾನ ಮೀಸಲಿಟ್ಟಿದ್ದೇವೆ. ನಮ್ಮ ರಾಜ್ಯದ ಬಜೆಟ್ ಗಾತ್ರ 3.70 ಲಕ್ಷ ಕೋಟಿಗೂ ಹೆಚ್ಚಿದೆ. ಅದರಲ್ಲಿ 56 ಸಾವಿರ ಕೋಟಿ ಈ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಫಲಾನುಭವಿಗಳ ಖಾತೆಗೆ ಹಣ ತಲುಪುವುದು 10-15 ದಿನಗಳು ವಿಳಂಬವಾಗಬಹುದು, ಆದರೆ ನಮ್ಮ ಯೋಜನೆ ನಿಲ್ಲುವುದಿಲ್ಲ. ದೇಶದಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಆರ್ಥಿಕತೆ ಹೊಂದಿರುವ ರಾಜ್ಯ. ನಾವು ದೇಶಕ್ಕೆ ಹೆಚ್ಚು ತೆರಿಗೆ ನೀಡುತ್ತಿದ್ದು, ನಮ್ಮ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ” ಎಂದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಜನರಿಗೆ ಆರ್ಥಿಕ ಶಕ್ತಿ ತುಂಬುವುದು ಅಭಿವೃದ್ಧಿಯಲ್ಲವೇ? ಪ್ರತಿ ಕುಟುಂಬ, ಜನರು ಆರ್ಥಿಕವಾಗಿ ಸುಭದ್ರವಾಗುವುದು ಅಭಿವೃದ್ಧಿಯಲ್ಲವೇ? ವ್ಯಾಪಾರಿಗಳು, ಜನ ಸಾಮಾನ್ಯರ ಬಳಿ ಹಣ ಹರಿದಾಡುತ್ತಿದ್ದು, ಸಂತೋಷವಾಗಿದ್ದಾರೆ. ಇದು ಅಭಿವೃದ್ಧಿಯಲ್ಲವೇ? ಜನರಿಗೆ ವೈಯಕ್ತಿಕವಾಗಿ ಆರ್ಥಿಕ ಬಲ ತುಂಬುವುದು ನಮ್ಮ ಯೋಜನೆಗಳ ಉದ್ದೇಶ. ಜನರು ಶಕ್ತಿಶಾಲಿಯಾದರೆ ಅವರ ಕುಟುಂಬ ಶಕ್ತಿಶಾಲಿಯಾಗುತ್ತದೆ. ಕುಟುಂಬಗಳು ಶಕ್ತಿಶಾಲಿಯಾದರೆ ನಮ್ಮ ರಾಜ್ಯ ಶಕ್ತಿಶಾಲಿಯಾಗುತ್ತದೆ” ಎಂದು ತಿಳಿಸಿದರು.

ಬಸ್ ದರ ಏರಿಕೆ ಬಗ್ಗೆ ಕೇಳಿದಾಗ, “ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಕೆಲವು ಮಾನದಂಡಗಳಿವೆ. ಇಂಧನ ಬೆಲೆ ಏರಿಕೆಯಾದಾಗ ಟಿಕೆಟ್ ದರ ಕೂಡ ಏರಿಕೆಯಾಗುತ್ತದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ನಾವು ಇಂಧನೆ ಬೆಲೆ ಏರಿಕೆಯಾದರೆ ಟಿಕೆಟ್ ದರ ಏರಿಸಲು ತೀರ್ಮಾನಿಸಲಾಗಿತ್ತು. ರಾಜ್ಯ ಸಾರಿಗೆ ಸಂಸ್ಥೆಗಳು ತಮ್ಮದೇ ಸಾಮರ್ಥ್ಯಗಳ ಮೇಲೆ ನಡೆಯುತ್ತಿವೆ” ಎಂದು ಉತ್ತರಿಸಿದರು.

ನಾನೂ ಸಹ ಔತಣಕೂಟ ಕರೆಯುತ್ತಿರುತ್ತೇನೆ; ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ದೆಹಲಿ :

“ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಿಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆಯೇ ಎಂದು ಕೇಳಿದಾಗ, “ಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜೊತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ತೆರಳಿದ್ದೆ” ಎಂದರು.

ಡಿಸಿಎಂ ಅವರ ಅನುಪಸ್ಥಿತಿಯಲ್ಲಿ ಔತಣಕೂಟ ಸಭೆ ನಡೆದಿದೆ ಎಂದು ಕೇಳಿದಾಗ, “ಅನೇಕ ಮಂತ್ರಿಗಳು ಸಹ ಕುಟುಂಬದವರ ಜೊತೆ ವಿದೇಶಿ ಪ್ರವಾಸ ಹೋಗಿದ್ದರು. ಬೆಂಗಳೂರಿನಲ್ಲಿ ಇದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದರು.

ಕ್ಯಾಬಿನೆಟ್ ಪುನರ್ ರಚನೆಯಾಗಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎಂದಾಗ, “ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಇದರ ಬಗ್ಗೆ ಮಾತನಾಡುತ್ತಾರೆ” ಎಂದರು.

ರಾಜ್ಯದಲ್ಲಿ ಎಂಟು ತಿಂಗಳ ಮಗುವಿನಲ್ಲಿ ಎಚ್ ಎಂವಿ ವೈರಸ್ ಪತ್ತೆಯಾಗಿರುವ ಬಗ್ಗೆ ಕೇಳಿದಾಗ, “ಈಗಾಗಲೇ ನಮ್ಮ ಆರೋಗ್ಯ ಸಚಿವರು ಕೆಲಸ ಮಾಡುತ್ತಿದ್ದಾರೆ. ಯಾರೂ ಸಹ ಆತಂಕಪಡುವ ಅವಶ್ಯಕತೆಯಿಲ್ಲ. ಸರ್ಕಾರ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ” ಎಂದು ಹೇಳಿದರು.