ಚೆನ್ನೈ: ತಮಿಳುನಾಡಿನ ಮಧುರೈ ಹಾಗೂ ತಿರುಚಿಯಲ್ಲಿ ಎರಡು TIDEL ಪಾರ್ಕ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಅಡಿಗಲ್ಲು ಹಾಕಿದರು.

ವಿಡಿಯೊ ಕಾನ್ಸರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಎರಡು ಪಾರ್ಕ್‌ಗಳ ನಿರ್ಮಾಣದ ನಂತರ ಒಟ್ಟು 12 ಸಾವಿರ ಉದ್ಯೋಗ ಸೃಜಿಸಲಿದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಪೂರಕ ಸೇವೆ, ಬಿಪಿಒ ಹಾಗೂ ಸ್ಟಾರ್ಟ್ ಅಪ್ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದು. ತಿರುಚಿ ಸಮೀಪದ ಪಂಜಪ್ಪರ್ ಬಳಿ 5.58 ಲಕ್ಷ ಚದರಡಿ ಜಾಗದಲ್ಲಿ ₹403 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಮದುರೈನಲ್ಲಿ 5.34 ಲಕ್ಷ ಚದರಡಿ ಜಾಗದಲ್ಲಿ ₹314 ಕೋಟಿ ವೆಚ್ಚದಲ್ಲಿ TIDEL ಪಾರ್ಕ್ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.