ಶಿವಮೊಗ್ಗ:
ಬ್ಯಾಗಿನಲ್ಲಿದ್ದ ವಸ್ತು ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭಾನುವಾರ (ಫೆ.18) ಸಂಭವಿಸಿದೆ.
ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಶಿರಾಳಕೊಪ್ಪದಲ್ಲಿನ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದ್ದು, ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭ ಅವರಿಟ್ಟಿದ್ದ ಚೀಲ ಸ್ಫೋಟಗೊಂಡಿದೆ ಎನ್ನಲಾಗಿದೆ. ಸಂತೆಯ ವೇಳೆ ಸಿಡಿಮದ್ದನ್ನು ತಂದಿದ್ದ ಚೀಲವನ್ನು ಅಂಗಡಿ ಬಳಿ ಇಟ್ಟಿದ್ದು, ಈ ವೇಳೆ ಅದು ಸ್ಫೋಟಗೊಂಡಿದ್ದು, ಅದರಲ್ಲಿ ಸಿಡಿಮದ್ದು ಇತ್ತು ಎಂದು ಹೇಳಲಾಗಿದೆ.
ಹಾವೇರಿಯ ದಂಪತಿ ತಂದಿದ್ದ ಬ್ಯಾಗ್ ನಲ್ಲಿ ಕಾಡುಪ್ರಾಣಿಗಳಿಗೆ ಇಡಲು ಬಳಸುವ ಸಿಡಿಮದ್ದು ತಂದಿದ್ದರು. ಈ ಘಟನೆಯ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋಟಗೊಂಡ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಎಸ್ಪಿ ಹೇಳಿಕೆ :
ಉಮೇಶ್ ಹಾಗೂ ಅವರ ಪತ್ನಿ ರೂಪಾ ಎನ್ನುವವರು ಸಂತೆಗಾಗಿ ಪಟ್ಟಣಕ್ಕೆ ಬಂದಿದ್ದಾರೆ. ದಂಪತಿ ಅಲ್ಲಿ ರಸ್ತೆ ಬದಿಯಲ್ಲಿ ಬ್ಲಾಂಕೆಟ್/ಕಂಬಳಿಯೊಂದನ್ನು ಖರೀದಿಸಿದ್ದಾರೆ. ಮಾರಾಟ ಮಾಡಿದ ವ್ಯಕ್ತಿ ಆಂಟೋನಿ ಹಾಗೂ ಈ ದಂಪತಿ ಪರಿಚಯದವರಾಗಿದ್ದಾರೆ. ಸಂತೆಯಲ್ಲಿ ಖರೀದಿ ಮಾಡಿ ಬರುತ್ತೇವೆ, ಅರ್ಧ ಗಂಟೆ ಬ್ಯಾಗ್ ಇಲ್ಲೇ ಇರಲಿ ಎಂದು ಹೇಳಿ ಬ್ಯಾಗ್ ಇಟ್ಟು ತೆರಳಿದ್ದಾರೆ.
ಅಲ್ಲಿಟ್ಟಿದ್ದ ಬ್ಯಾಗ್‌’ನಿಂದ ಕೆಲ ಸಮಯದ ನಂತರ ಸ್ಪೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಂತೆ ಕಾಡು ಹಂದಿಗಳಿಗೆ ಸಿಡಿಸುವ
ಸಿಡಿಮದ್ದನ್ನು ಆ ಬ್ಯಾಗ್‌’ನಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಆರೋಪಿಯನ್ನು ಗುರುತಿಸಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯಲಾಗುವುದು. ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಯಾರೂ ಸಹ ಸ್ಪಷ್ಟ ಮಾಹಿತಿ ಇಲ್ಲದೇ ಸುಳ್ಳು ಸುದ್ದಿ ಹರಡಿಸಬಾರದು. ಯಾರೇ ಸೂಕ್ಷ್ಮಸಂದರ್ಭದಲ್ಲಿ ಸುಳ್ಳು ಮಾಹಿತಿ ಹರಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.