ಬೆಳಗಾವಿ : ಇಲ್ಲಿನ ಖಾಸಗಿ ವಿಮಾನಯಾನ ಅಕಾಡೆಮಿಯ ಎರಡು ಆಸನಗಳ ವಿಮಾನ (ಮಾದರಿ 152)ಪರೀಕ್ಷಾರ್ಥ ಹಾರಾಟದ ವೇಳೆ ಭಾನುವಾರ ಮಧ್ಯಪ್ರದೇಶದ ಗುನಾ ಏರ್‌ಸ್ಟ್ರಿಪ್‌ನಲ್ಲಿ ಪತನಗೊಂಡಿದೆ. ಇಬ್ಬರು ಪೈಲಟ್‌ಗಳನ್ನು ಹೊತ್ತೊಯ್ಯುವ ಪರೀಕ್ಷಾರ್ಥ ಹಾರಾಟಕ್ಕೆ ವಿಮಾನ ಟೇಕಾಫ್ ಆಗುವಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸುಮಾರು 40 ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ ವಿಮಾನವು ಏರ್‌ಸ್ಟ್ರಿಪ್‌ನ ಆವರಣದಲ್ಲಿ ಪತನಗೊಂಡಿತು.

ಪೈಲಟ್‌ಗಳಾದ ಕ್ಯಾಪ್ಟನ್ ವಿ.ಚಂದ್ರ ಠಾಕೂರ್ ಮತ್ತು ನಾಗೇಶ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೃಷ್ಟವಶಾತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಅವರು ಮೂಲತಃ ಹೈದರಾಬಾದ್ ಮೂಲದವರು. ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾದ ಮಾಹಿತಿ ಲಭಿಸಿದೆ. ಇಂಜಿನ್ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಕರ್ನಾಟಕದ ಬೆಳಗಾವಿ ವಿಮಾನಯಾನ ತರಬೇತಿ ಸಂಸ್ಥೆಗೆ ಸೇರಿದ ಈ ವಿಮಾನವನ್ನು ಪರೀಕ್ಷೆ ಮತ್ತು ನಿರ್ವಹಣೆಗಾಗಿ ಗುನಾದಲ್ಲಿರುವ ಶಾ-ಶಿಬ್ ಅಕಾಡೆಮಿಗೆ ತರಲಾಗಿತ್ತು. ಪೈಲಟ್‌ಗಳನ್ನು ಇನ್‌ಸ್ಟಿಟ್ಯೂಟ್ ನೇಮಿಸಿಕೊಂಡಿದ್ದು, ಶನಿವಾರ ಗುನಾಕ್ಕೆ ಆಗಮಿಸಿದ್ದರು.