ಮುಂಬೈ: ಉಡುಪಿ ಪಾಂಗಾಳ ಮೂಲದ ತನುಷ್ ಕೋಟ್ಯಾನ್ ಸಮಯೋಚಿತ ಶತಕದ (114*) ಬೆಂಬಲದೊಂದಿಗೆ ಮುಂಬೈ ತಂಡವು, 27 ವರ್ಷಗಳ ಬಳಿಕ ಇರಾನ್ ಕಪ್ ಗೆದ್ದುಕೊಂಡಿದೆ. ಅಂತಿಮ ದಿನದಾಟದಲ್ಲಿ ನೆಲಕಚ್ಚಿ ಆಡಿದ ತನುಷ್ ಕೋಟ್ಯಾನ್ ಭಾರತ ಇತರರ ತಂಡದ ಪ್ರಶಸ್ತಿ ಆಸೆಗೆ ತಣ್ಣೀರೆರಚಿದರು.
ಲಖನೌದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಇತರರ ತಂಡದ ವಿರುದ್ಧ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿದೆ. ಆ ಮೂಲಕ ಮುಂಬೈ, 15 ನೇ ಸಲ ಇರಾನಿ ಕಪ್ ಗೆದ್ದ ಸಾಧನೆ ಮಾಡಿದೆ.
ಒಟ್ಟಾರೆಯಾಗಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಹಾಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ, ಇರಾನಿ ಕಪ್ ಗೆದ್ದ ಸಾಧನೆ ಮಾಡಿದೆ.
ಮುಂಬೈ ನಾಲ್ಕನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಒಟ್ಟಾರೆ 274 ರನ್ಗಳ ಮುನ್ನಡೆ ಗಳಿಸಿತ್ತು. ಇದರಿಂದ ಪಂದ್ಯದಲ್ಲಿ ತಿರುಗೇಟು ನೀಡುವ ಅವಕಾಶ ಭಾರತ ಇತರರ ತಂಡಕ್ಕಿತ್ತು.
ಕೋಟ್ಯಾನ್ ಅವರು ಮೋಹಿತ್ ಅವಸ್ತಿ ಜತೆ ಮುರಿಯದ ಒಂಬತ್ತನೇ ವಿಕೆಟ್ಗೆ 158 ರನ್ಗಳ ಜೊತೆಯಾಟ ಕಟ್ಟಿದರು. ಮೋಹಿತ್ 51 ರನ್ ಗಳಿಸಿ ಅಜೇಯರಾಗುಳಿದರು.
ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಕೆಚ್ಚೆದೆಯ ಇನಿಂಗ್ಸ್ ಕಟ್ಟಿದ ಕೋಟ್ಯಾನ್ 114 ರನ್ ಗಳಿಸಿ ಔಟಾಗದೆ ಉಳಿದರು. ಪರಿಣಾಮ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 329 ರನ್ ಪೇರಿಸಿ ಡಿಕೇರ್ ಘೋಷಿಸಿತು. ಆ ಮೂಲಕ ಒಟ್ಟಾರೆ 450 ರನ್ಗಳ ಮುನ್ನಡೆ ಗಳಿಸಿತು.
ಬಳಿಕ ದಿನದಾಟದ ಉಳಿದಿರುವ ಅವಧಿಯಲ್ಲಿ ಗುರಿ ಮುಟ್ಟುವುದು ಅಸಾಧ್ಯವೆನಿಸಿದ್ದರಿಂದ ಪಂದ್ಯ ಡ್ರಾಗೊಳಿಸಲು ಉಭಯ ತಂಡದ ನಾಯಕರು ನಿರ್ಧರಿಸಿದರು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬೈ ವಿಜಯಿಶಾಲಿಯಾಗಿ ಹೊರಹೊಮ್ಮಿತು.
ಭಾರತ ಇತರರ ತಂಡದ ಪರ ಆರು ವಿಕೆಟ್ ಗಳಿಸಿದ ಸಾರಾಂಶ್ ಜೈನ್ ಹೋರಾಟ ವ್ಯರ್ಥವೆನಿಸಿತು.
ಈ ಮೊದಲು ಸರ್ಫರಾಜ್ ಖಾನ್ ಅಮೋಘ ದ್ವಿಶತಕದ (222*) ಬೆಂಬಲದಿಂದ ಮುಂಬೈ ಮೊದಲ ಇನಿಂಗ್ಸ್ನಲ್ಲಿ 537 ರನ್ ಪೇರಿಸಿತ್ತು. ಭಾರತ ಇತರರ ತಂಡದ ಪರ ಮುಕೇಶ್ ಕುಮಾರ್ ಐದು ವಿಕೆಟ್ ಗಳಿಸಿದರು.
ಬಳಿಕ ಅಭಿಮನ್ಯು ಈಶ್ವರನ್ ದಿಟ್ಟ ಹೋರಾಟದ (191) ಹೊರತಾಗಿಯೂ ಭಾರತ ಇತರರ ತಂಡ 416 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮುಂಬೈ ಪರ ತನುಷ್ ಕೋಟ್ಯಾನ್ ಮೂರು ವಿಕೆಟ್ ಗಳಿಸಿದ್ದರು.
1997-98ನೇ ಸಾಲಿನಲ್ಲಿ ಮುಂಬೈ ಕೊನೆಯ ಬಾರಿ ಇರಾನಿ ಕಪ್ ಗೆದ್ದಿತ್ತು. ಅಲ್ಲಿಂದ ಬಳಿಕ ಎಂಟು ಸಲ ಫೈನಲ್ಗೆ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2015-16ರ ಸಾಲಿನಲ್ಲಿ ಕೊನೆಯ ಬಾರಿ ಫೈನಲ್ಗೆ ಲಗ್ಗೆಯಿಟ್ಟಿತ್ತು.