
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿ ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಎಲೋನ್ ಮಸ್ಕ್ ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆಯಿಂದ ಕೆಳಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತು ತಮ್ಮದೇ ಒಡೆತನದ ಸಾಮಾಜಿಕ ಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಡೊಗೆ (“DOGE”) ಎಂದು ಕರೆಯಲ್ಪಡುವ ಸರ್ಕಾರಿ ದಕ್ಷತೆಯ ಇಲಾಖೆಯನ್ನು ಮುನ್ನಡೆಸುವ ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಅವಧಿ ಕೊನೆಗೊಂಡಿದೆ. ಅನಗತ್ಯ ವೆಚ್ಚಗಳನ್ನು ಕಡಿತ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿರುವ ಅವರು, ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಕಾಲಕ್ರಮೇಣ ಬಲಗೊಳ್ಳಲಿದ್ದು, ಸರ್ಕಾರದ ಕಾರ್ಯವಿಧಾನ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಎಲೋನ್ ಮಸ್ಕ್ ಅವರನ್ನು “ವಿಶೇಷ ಸರ್ಕಾರಿ ಉದ್ಯೋಗಿ” ಎಂದು ನೇಮಿಸಲಾಯಿತು, ಇದು ವ್ಯಕ್ತಿಗಳು ವಾರ್ಷಿಕವಾಗಿ 130 ದಿನಗಳವರೆಗೆ ಸರ್ಕಾರಿ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಪದನಾಮವಾಗಿದೆ. ಈ ವರ್ಷದ ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರದ ನಂತರ ಎಲೋನ್ ಮಸ್ಕ್ ಅವರ ಅಧಿಕಾರಾವಧಿಯು ಮೇ ಅಂತ್ಯದ ವೇಳೆಗೆ ಸ್ವಾಭಾವಿಕವಾಗಿ ಮುಗಿಯುತ್ತದೆ,
ತೆರಿಗೆ ನೀತಿಗೆ ಸಂಬಂಧಿಸಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಟ್ರಂಪ್ ಆಡಳಿತವನ್ನು ತೊರೆಯಲು ಮಸ್ಕ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆ ವೇಳೆ ತಮ್ಮನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉಸ್ತುವಾರಿಯಾಗಿ ನೇಮಿಸಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು. ನೇಮಿಸಿದ ನಂತರ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರು. ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ ನೆರವು (USAID) ನಿಲ್ಲಿಸಿದ್ದರು. ಇದರಿಂದಾಗಿ ಮಸ್ಕ್ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಹೇಳಲಾಗಿದೆ.