ಹೆಬ್ರಿ: ಇಲ್ಲಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮಿನಾರಾಯಣ ನಾಯಕ್ , ಅಧ್ಯಕ್ಷ ಪ್ರಭಾಕರ ಪೂಜಾರಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದು , ಅವರಿಗೆ ವಿದ್ಯಾರ್ಥಿಗಳು ರಕ್ಷೆ ಕಟ್ಟಿ , ಆರತಿ ಬೆಳಗಿ , ಕುಂಕುಮ ಹಚ್ಚಿ , ಸಿಹಿ ಹಂಚಿ ಅಣ್ಣ-ತಂಗಿಯರ ಸಂಬಂಧ ಬೆಸೆದು ರಕ್ಷಾ ಬಂಧನವನ್ನು ಸಂಭ್ರಮಿಸಿದರು. ಅತಿಥಿ ಲಕ್ಷ್ಮೀ ನಾರಾಯಣ ನಾಯಕ್ ಮಾತನಾಡಿ, ಕೊರೊನದಂತಹ ಸಂಕಷ್ಟ ಕಾಲದಲ್ಲಿ ರಿಕ್ಷಾ ಮಾಲಕರು ಸಾರ್ವಜನಿಕರಿಗೆ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅಂಥಹ ಸಮಾಜಮುಖಿ ಚಿಂತನೆಯ ಆಟೋ ಚಾಲಕ ಮಾಲಕರನ್ನು ಕರೆದು ರಕ್ಷೆ ಕಟ್ಟಿ ಅಮೃತ ಭಾರತಿ ಸಾರ್ಥಕತೆ ಮೆರೆದಿದೆ ಎಂದರು. ಪ್ರಭಾಕರ ಪೂಜಾರಿಯವರು ಮಾತನಾಡಿ , ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನನಗೆ ಇದೊಂದು ಮರೆಯಲಾಗದ ಕಾರ್ಯಕ್ರಮ ಎಂದರು . ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಕೇವಲ ಪಾಠ ಪ್ರವಚನಗಳು ನಡೆಯುತ್ತಿದೆ . ಇದಕ್ಕೆ ವಿಭಿನ್ನವಾಗಿ ಅಮೃತ ಭಾರತಿ ಸಮಾಜದೊಂದಿಗೆ ಬೆರೆತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಂಡು ಬಾಂಧವ್ಯ ಮೆರೆದರು. ಬೋಧಕ ಬೋಧಕೇತರ ಸಿಬ್ಬಂದಿ ಉಪ್ಥಿತರಿದ್ದರು. ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.