ದೆಹಲಿ: ಒಂದು ರಾಷ್ಟ್ರ-ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಮನಾಥ್ ಕೋವಿಂದ್‌ ಸಮಿತಿಯ ವರದಿಗೆ ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಇದು ಕಾನೂನಾದರೆ, 100 ದಿನಗಳ ಅವಧಿಯಲ್ಲಿ ಲೋಕಸಭೆ, ವಿಧಾನಸಭೆ & ಸ್ಥಳೀಯ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕಾಗುತ್ತದೆ. ಇದು ಸಾರ್ವಜನಿಕ ಹಣವನ್ನು ಉಳಿಸುತ್ತದೆ. ಸರ್ಕಾರಗಳು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

 

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಗೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ್ದ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿಯು ಈ ವರದಿಯನ್ನು ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಮಾರ್ಚ್‌ನಲ್ಲೇ ನೀಡಿತ್ತು.

‘ಒಂದು ರಾಷ್ಟ್ರ, ಒಂದು ಚುನಾವಣೆ’ಯು ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ನೀಡಿದ್ದ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿತ್ತು.

ಮೋದಿ ಸರ್ಕಾರ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರಿ 100 ದಿನಗಳನ್ನು ಪೂರೈಸಿದ ಸಂದರ್ಭ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆ ಇದೇ ಅವಧಿಯಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದ್ದರು.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ವರ್ಷದ ಮಾರ್ಚ್‌ 14 ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಚಿಸಲಾದ ಸಮಿತಿಯ ವರದಿಯನ್ನು ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಗೆ ಬುಧವಾರ ಅನುಮೋದನೆ ನೀಡಿದೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’- ಇದು ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವುದನ್ನು ಪ್ರಸ್ತಾಪಿಸುತ್ತದೆ. ಪ್ರಸ್ತಾವನೆಯನ್ನು ಸಂಸತ್ತಿನ ಮುಂಬರುವ ಅಧಿವೇಶನಲ್ಲಿ ಮಂಡಿಸಲಾಗುತ್ತದೆ. ಇದು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳನ್ನು ಅನುಮೋದನೆ ಪಡೆಯಬೇಕು. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವಿರುತ್ತದೆ ಮತ್ತು ಆ ತಿದ್ದುಪಡಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಮೋದಿಸಬೇಕಾಗುತ್ತದೆ.
32 ಪಕ್ಷಗಳು ಮತ್ತು ಮಾಜಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗದ ಪ್ರಮುಖ ವ್ಯಕ್ತಿಗಳು ಇದನ್ನು ಬೆಂಬಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಪ್ರತಿಪಾದಿಸಿದರು, ಆಗಾಗ್ಗೆ ಚುನಾವಣೆಗಳು ದೇಶದ ಪ್ರಗತಿಗೆ ಅಡ್ಡಿ ಉಂಟುಮಾಡುತ್ತವೆ ಎಂದು ಹೇಳಿದ್ದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡಬಹುದು…?
‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಕಲ್ಪನೆಯು ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದನ್ನು ಸೂಚಿಸುತ್ತದೆ, ಅಂದರೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಇದರ ಉದ್ದೇಶ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಕಲ್ಪನೆಯನ್ನು ಮೊದಲು 1980 ರ ದಶಕದಲ್ಲಿ ಪ್ರಸ್ತಾಪಿಸಲಾಯಿತು. ನ್ಯಾಯಮೂರ್ತಿ ಬಿ.ಪಿ. ಜೀವನ ರೆಡ್ಡಿ ನೇತೃತ್ವದ ಕಾನೂನು ಆಯೋಗವು ಮೇ 1999 ರಲ್ಲಿ ತನ್ನ 170 ನೇ ವರದಿಯಲ್ಲಿ “ನಾವು ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಪರಿಸ್ಥಿತಿಗೆ ಹಿಂತಿರುಗಬೇಕು” ಎಂದು ಹೇಳಿತ್ತು.
1951-52, 1957, 1962 ಮತ್ತು 1967 ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು. ಆದರೆ, ವಿಧಾನಸಭೆಗಳು ಅವಧಿಗೆ ಮುಂಚೆಯೇ ವಿಸರ್ಜನೆಗೊಂಡ ನಂತರ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯ ಈ ಚಕ್ರಕ್ಕೆ ಅಡ್ಡಿಯಾಯಿತು. 1970ರಲ್ಲಿ ಲೋಕಸಭೆಯನ್ನೂ ವಿಸರ್ಜನೆ ಮಾಡಲಾಯಿತು.

ಪ್ರತಿಪಕ್ಷಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ವಿರೋಧಿಸುತ್ತವೆ ಯಾಕೆ…?
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ಹಲವು ವಿರೋಧ ಪಕ್ಷಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ವಿರೋಧಿಸಿವೆ. ಬಿಜೆಪಿಯು ಸಂಸದೀಯ ವ್ಯವಸ್ಥೆಯ ಸರ್ಕಾರವನ್ನು ಅಧ್ಯಕ್ಷೀಯ ವ್ಯವಸ್ಥೆಗೆ ಬದಲಿಸಲು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಬಗ್ಗೆ ಪ್ರಸ್ತಾಪಿಸುತ್ತಿದೆ ಎಂದು ಆರೋಪಿಸಿದೆ.
ಪ್ರಸ್ತಾವನೆ ಅಂಗೀಕಾರದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್, “ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯ ಮತ್ತೊಂದು ಸ್ಟಂಟ್” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಬಿಜೆಪಿಯ ಪ್ರತಿಪಾದನೆ ಮಾಡುತ್ತ ಬಂದಿದ್ದು, ಸ್ವತಃ ಪ್ರಧಾನಿ ಮೋದಿ ಇದರ ನೇತೃತ್ವ ವಹಿಸಿದ್ದರು. ವಾಸ್ತವವಾಗಿ, ಬಿಜೆಪಿ ಪಕ್ಷವು ತನ್ನ ಸಾರ್ವತ್ರಿಕ ಚುನಾವಣೆಯ ಪ್ರಣಾಳಿಕೆಯಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ಭರವಸೆ ನೀಡಿದೆ.

ಕೇಂದ್ರ ಸಚಿವ ಸಂಪುಟವು ಒಂದು ದೇಶ ಒಂದು ಚುನಾವಣೆಗೆ ಒಪ್ಪಿಗೆ ನೀಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು :

ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘‘ಒಂದು ದೇಶ ಒಂದು ಚುನಾವಣೆ’’ ಯ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಮಾತ್ರವಲ್ಲ ‘‘ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು’’. ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೆ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಠ ಉದ್ದೇಶವನ್ನು ಅನಾವರಣಗೊಳಿಸಿದೆ.

ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ, ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನ ಬವಣೆಪಡುತ್ತಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣ ತಪ್ಪಿಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿಮೀರಿ ಹೋಗುತ್ತಿದೆ. ಈ ಬಗ್ಗೆ ಯೋಚನೆ ಮಾಡಲು ಕೂಡಾ ಪುರುಸೊತ್ತಿಲ್ಲದ ಪ್ರಧಾನ ಮಂತ್ರಿಗಳು ‘‘ಒಂದು ದೇಶ ಒಂದು ಚುನಾವಣೆ’’ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹೊರಟಿದ್ದಾರೆ.

ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ “ಒಂದು ದೇಶ ಒಂದು ಚುನಾವಣೆ” ಪ್ರಸ್ತಾವವನ್ನು ಸಂಸತ್ ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘‘ಒಂದು ದೇಶ ಒಂದು ಚುನಾವಣೆ’’ ವ್ಯವಸ್ಥೆಗೆ ವಿರುದ್ಧವಾಗಿದೆ.

ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೆ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾವದಲ್ಲಿ ಪರಿಹಾರ ಇಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರವಾಗಿದೆ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ.

ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ನಮ್ಮ ಈಗಿನ ಚುನಾವಣಾ ಆಯೋಗಕ್ಕೆ ಇಲ್ಲ. ಇದಕ್ಕಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ.

ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕಾಗಿದೆ. ಈಗಿನ ವ್ಯವಸ್ಥೆಯಲ್ಲಿ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸದಸ್ಯರ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಎನ್‌ಡಿಎ ಗೆ ಕೂಡಾ ಕಷ್ಟ ಸಾಧ್ಯ. ಇವೆಲ್ಲವೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟುಹಾಕಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಈ ಪ್ರಸ್ತಾವವನ್ನು ಸಚಿವ ಸಂಪುಟ ಅಂಗೀಕರಿಸಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಹಾಸ್ಯಾಸ್ಪದ: ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಮತ

ಬೆಂಗಳೂರು:
ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅವರು “ಆಪರೇಷನ್ ಕಮಲಕ್ಕೆ ಮೂಲದಾತರುಗಳಾದ ಬಿಜೆಪಿಯವರೇ ಒಂದು ರಾಷ್ಟ, ಒಂದು ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, “ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿರುವುದನ್ನು ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಈ ಹುನ್ನಾರ ಮಾಡಿದೆ” ಎಂದರು.

“ದೇಶದಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಸಿಗಬೇಕು. ಈ ಹಿಂದೆಯೂ ಒಂದು ರಾಷ್ಡ್ರ, ಒಂದು ಚುನಾವಣೆ ವ್ಯವಸ್ಥೆ ನಮ್ಮಲ್ಲಿತ್ತು. ನಮ್ಮ ರಾಜ್ಯದಲ್ಲಿಯೂ ಒಟ್ಟಿಗೆ ಚುನಾವಣೆ ಮಾಡಲಾಯಿತು. ಆನಂತರ ಸಾಧ್ಯವಾಯಿಯೇ? ಆಗಲಿಲ್ಲ. ಏಕೆಂದರೆ ಒಂದಷ್ಟು ಸರ್ಕಾರಗಳು ಕ್ಯಾಬಿನೆಟ್ ಅಲ್ಲಿ ಆರು ಹಾಗೂ ಮೂರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋಗುತ್ತೇವೆ ಎಂದರು, ಒಂದಷ್ಟು ರಾಜ್ಯಗಳಲ್ಲಿ ಸರ್ಕಾರಗಳೇ ವಿಸರ್ಜನೆಗೊಂಡವು. ಹೀಗಿರುವಾಗ ಈ ವ್ಯವಸ್ಥೆಯನ್ನು ಜಾರಿಗೆ ತರಲು ಹೇಗೆ ಸಾಧ್ಯ?” ಎಂದರು.

*ಬಿಜೆಪಿ ಮೊದಲು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಲಿ*

“ಬಿಜೆಪಿ ಈ ಪ್ರಯತ್ನ ಮಾಡುತ್ತಿರುವುದು ಸರಿಯಿಲ್ಲ. ಅಲ್ಲದೇ ಮೂರನೇ ಒಂದರಷ್ಟು ಬಹುಮತವು ಅವರಿಗಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಒಮ್ಮತದ ಅಭಿಪ್ರಾಯ ಕೇಳಲಿ. ಇದರ ಹೊರತು ಇಂತಹ ಪ್ರಸ್ತಾವನೆಗಳು ವ್ಯರ್ಥ. ಮೊದಲು ಮಹಿಳಾ ಮೀಸಲಾತಿ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಕ್ಷೇತ್ರ ವಿಂಗಡಣೆಗೆ ಕ್ರಮ ತೆಗೆದುಕೊಳ್ಳಲಿ. ಒಂದು ಚುನಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಅರ್ಥಪೂರ್ಣವಾದ ಮಾತಿಗೆ ನಮ್ಮ ಒಮ್ಮತದ ಒಪ್ಪಿಗೆಯಿದೆ” ಎಂದರು.

*ಗುರುವಾರ ಒಕ್ಕಲಿಗ ನಾಯಕರ ನಿಯೋಗ ಭೇಟಿಗೆ ಸಮಯ*

ಮುನಿರತ್ನ ವಿಚಾರವಾಗಿ ಒಕ್ಕಲಿಗ ನಾಯಕರ ನಿಯೋಗದ ಭೇಟಿ ಬಗ್ಗೆ ಕೇಳಿದಾಗ “ಒಕ್ಕಲಿಗ ನಾಯಕರ ನಿಯೋಗದ ಭೇಟಿಗೆ ಗುರುವಾರ (ಸೆ.18) ಸಂಜೆ ಸಮಯ ನೀಡಿದ್ದೇನೆ. ಈ ವಿಚಾರವಾಗಿ ಅಶೋಕ್ ಅವರ ಹಾಗೂ ಬೇರೆಯವರ ನುಡಿಮುತ್ತುಗಳನ್ನು ತಾವೆಲ್ಲಾ ಗಮನಿಸಿದ್ದೀರಿ. ಇದರ ಬಗ್ಗೆ ಆನಂತರ ಮಾತನಾಡುತ್ತೇನೆ” ಎಂದರು.

*ದೇವೇಗೌಡರೇ ಒಕ್ಕಲಿಗರ ಸರ್ವೋಚ್ಚ ನಾಯಕರು*

ದೇವೇಗೌಡರೇ ಒಕ್ಕಲಿಗರ ಸರ್ವೋಚ್ಚ ನಾಯಕ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ “ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರನ್ನು ಸರ್ವೋಚ್ಚ ನಾಯಕರಲ್ಲ ಎಂದು ನಾವು ಹೇಳಿಲ್ಲ. ಅವರನ್ನು ನಾವು ನಾಯಕರಲ್ಲ ಎಂದು ಹೇಳಲು ಸಾಧ್ಯವೇ? ದೇವೇಗೌಡರನ್ನು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದೇ ಕಾಂಗ್ರೆಸ್ ಪಕ್ಷ. ಬಿಜೆಪಿ ಅವರಿಗೆ ಸ್ಥಾನ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಯಡಿಯೂರಪ್ಪ ಅವರು, ಆರ್. ಅಶೋಕ್ ಅವರು ಏನೇನು ಮಾತನಾಡಿದ್ದರು? ಸುಮ್ಮನೆ ಸಮಯಕ್ಕೆ ತಕ್ಕಂತೆ ಮಾತನಾಡುವುದಲ್ಲ” ಎಂದರು.

ಡಿ.ಕೆ.ಸಹೋದರರು ಮುನಿರತ್ನ ವಿರುದ್ದ ಪಿತೂರಿ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದಾಗ “ಹಾಗಾದರೆ ನಾವು ಹೇಳಿಕ್ಕೊಟ್ಟಂತೆ ಅವರು (ಮುನಿರತ್ನ) ಡೈಲಾಗ್ ಹೊಡೆಯುತ್ತಿದ್ದಾರಾ? ಅವರ ಮಾತುಗಳನ್ನು ನಾನು ನೋಡಿದೆ, ಸ್ವಾಮೀಜಿಗಳು ನೋಡಿದ್ದಾರಂತೆ. ಹೀಗೆ ಮಾತನಾಡು ಎಂದು ನಾವು ಅವರಿಗೆ ಹೇಳಿಕೊಟ್ಟಿದ್ದೇವೆಯೇ? ಇಲ್ಲಿ ಡೈಲಾಗ್ ನಿರ್ದೇಶಕರು, ನಿರ್ಮಾಪಕರು ಯಾರಿದ್ದಾರೆ? ಎಲ್ಲರೂ ಅವರ ಜೊತೆಯಲ್ಲೇ ಇದ್ದಾರೆ” ಎಂದರು.