ಮೂಡಲಗಿ: ಕರ್ನಾಟಕದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಆರ್ಥಿಕ ವರ್ಷ 2024-25 ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಗೊಳಿಸಲು ರಾಜ್ಯಕ್ಕೆ 326.02 ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ವಿತರಿಸಿದ ಬಜೆಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅನುಷ್ಠಾನಕ್ಕೆ 7553.00 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಮತ್ತು 25 ನವೆಂಬರ್ 2024 ರವರೆಗೆ 3075.26 ಕೋಟಿ ರೂಪಾಯಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ ಎಂದರು.

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಆಗಿದೆ, ಆದರೆ ಇದು ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಆಗಿದೆ. ಕೇಂದ್ರಾಡಳಿತ ಪ್ರದೇಶಗಳಿಗೆ, ಕೇಂದ್ರ ಪಾಲು 100% ಆಗಿದೆ.

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ, ಮಳೆಯಾಧಾರಿತ ಪ್ರದೇಶ ಅಭಿವೃದ್ಧಿ, ಪರಂಪರಾಗತ್ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರೀಕರಣದ ಉಪ ಮಿಷನ್, ಪರ್ ಡ್ರಾಪ್ ಮೋರ್ ಕ್ರಾಪ್, ಕೃಷಿ ಅರಣ್ಯ, ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ, ಗೋದಾಮು ನಿರ್ಮಾಣ, ನೀರು ಕೊಯ್ಲು ರಚನೆಗಳು, ಪ್ರಾಥಮಿಕ ಪ್ರಾತ್ಯಕ್ಷಿಕೆ ಘಟಕಗಳ ಸ್ಥಾಪನೆ, ಟ್ರಾಕ್ಟರ್‌ಗಳು, ಪವರ್ ಟೇಲರ್‌ಗಳು ಮತ್ತು ಡ್ರೋನ್‌ಗಳ ಖರೀದಿ, ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ, ಸಮಗ್ರ ಕೃಷಿಯ ಉತ್ತೇಜನ, ಮಣ್ಣಿನ ಆರೋಗ್ಯ ಫಲವತ್ತತೆ, ಕೃಷಿ ವಲಯದ ಮೂಲಸೌಕರ್ಯ ಸುಧಾರಣೆಗೆ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರವು ಮೊತ್ತವನ್ನು ಬಳಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.