ಮೂಡಲಗಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯಡಿ ಕರ್ನಾಟಕ ರಾಜ್ಯದ ಜಿಲ್ಲಾ ಖನಿಜ ನಿಧಿಗೆ 2015-16 ರಿಂದ 2024 ರ ಅಕ್ಟೋಬರ್ 31 ರವರೆಗೆ 5,329.76 ಕೋಟಿ ರೂಪಾಯಿಗಳ ಸಂಗ್ರಹವಾಗಿದ್ದು, ಅದರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 4,086.73 ಕೋಟಿ ರೂ.ಗಳ 13,002 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿ ಖನಿಜ ಪ್ರದೇಶ ಕಲ್ಯಾಣ ಯೋಜನೆಯಡಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು 2015-16 ರಿಂದ 2023 ರವರೆಗೆ 59,97 ಕೋಟಿ ರೂಪಾಯಿಗಳ ಸಂಗ್ರಹವಾಗಿದ್ದು, ಅದರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 42,58 ಕೋಟಿ ರೂ.ಗಳ ಅನುದಾನ ಬಳಕೆಯಾಗಿದೆ ಎಂದರು.
ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆಯ ಕ್ಷೇತ್ರಗಳಲ್ಲಿ ಖರ್ಚು ಮಾಡಲು ಸೂಚನೆಗಳನ್ನು ನೀಡಿದೆ. ಕುಡಿಯುವ ನೀರು ಸರಬರಾಜು, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ವೃದ್ಧರ ಮತ್ತು ಅಂಗವಿಕಲರ ಕಲ್ಯಾಣ, ಕೌಶಲ್ಯ ಅಭಿವೃದ್ಧಿ, ನೈರ್ಮಲ್ಯ, ವಸತಿ, ಕೃಷಿ ಮತ್ತು ಪಶುಸಂಗೋಪನೆ. ಭೌತಿಕ ಮೂಲಸೌಕರ್ಯ, ನೀರಾವರಿ, ಇಂಧನ ಮತ್ತು ಜಲಾನಯನ ಅಭಿವೃದ್ಧಿ ಮತ್ತು ಗಣಿಗಾರಿಕೆ ಪೀಡಿತ ಜಿಲ್ಲೆಯಲ್ಲಿ ಪರಿಸರ ಗುಣಮಟ್ಟವನ್ನು ಹೆಚ್ಚಿಸುವ ಇತರ ಯಾವುದೇ ಕ್ರಮಗಳಂತಹ ಇತರ ಆದ್ಯತೆಯ ಕ್ಷೇತ್ರಗಳಿಗೆ 30% ರಷ್ಟು ಹಣವನ್ನು ಖರ್ಚು ಮಾಡಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.